ಬೆಂಗಳೂರು [ಜು.25] : ಮೈತ್ರಿ ಸರ್ಕಾರ ಕುಸಿದರೂ ಹೊಸ ಸರ್ಕಾರ ರಚನೆ ಮಾಡುವ ಪ್ರಸ್ತಾಪವನ್ನು ಬಿಜೆಪಿ ಇನ್ನೂ ರಾಜ್ಯಪಾಲರ ಮುಂದಿಟ್ಟಿಲ್ಲ. ಹೀಗಾಗಿ ಅತೃಪ್ತ ಶಾಸಕರ ಮೇಲೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದಂತೆ ಕಾಂಗ್ರೆಸ್‌ ನಿಯೋಗ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ಅವರ ಮೇಲೆ ಒತ್ತಡ ನಿರ್ಮಾಣ ಮಾಡಿದೆ ಎಂದು ತಿಳಿದುಬಂದಿದೆ.

ಅತೃಪ್ತ ಶಾಸಕರ ರಾಜೀನಾಮೆ ಅಥವಾ ಅನರ್ಹತೆ ವಿಚಾರ ಬಗೆಹರಿದ ನಂತರ ಹೊಸ ಸರ್ಕಾರ ರಚನೆಯ ಪ್ರಸ್ತಾಪವನ್ನು ರಾಜ್ಯಪಾಲರ ಮುಂದಿಡುವ ಉದ್ದೇಶ ಬಿಜೆಪಿ ಹೊಂದಿದೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಈ ಕಾರ್ಯತಂತ್ರ ರೂಪಿಸಿದ್ದು, ಅತೃಪ್ತ ಶಾಸಕರ ಮೇಲೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಕೋರಿದೆ ಎನ್ನಲಾಗಿದೆ.

ಅತೃಪ್ತರನ್ನು ಅನರ್ಹಗೊಳಿಸಬೇಕು. ತನ್ಮೂಲಕ ಪಕ್ಷದ್ರೋಹವೆಸಗಿದ ಅವರಿಗೆ ತಕ್ಕಶಾಸ್ತಿ ಮಾಡಬೇಕು ಎಂಬ ಉದ್ದೇಶವಿದ್ದರೂ, ಬಿಜೆಪಿಯು ಹೊಸ ಸರ್ಕಾರ ರಚನೆಗೆ ಸ್ಪೀಕರ್‌ ಅವರ ನಡೆಯನ್ನು ಕಾದು ನೋಡುತ್ತಿರುವ ಹಿನ್ನೆಲೆಯಲ್ಲಿ ಈ ವಿಳಂಬ ನೀತಿ ಅನುಸರಿಸುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಭೇಟಿ ಮಾಡಿದ್ದ ಕಾಂಗ್ರೆಸ್‌ ನಿಯೋಗ ಸ್ಪೀಕರ್‌ ಅವರ ಮೇಲೆ ಒತ್ತಡ ಹಾಕಿದೆ ಎಂದು ತಿಳಿದು ಬಂದಿದೆ.