ಬೆಂಗಳೂರು : ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ರಣತಂತ್ರ ರೂಪಿಸುತ್ತಿದ್ದು, ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. 

ಸಚಿವ ಸಂಪುಟ ಸಭೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಸಭೆ ಸೇರಿದ್ದು, ಸಭೆಯಲ್ಲಿ ‌ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,  ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಚಿವ ಜಮ್ಮೀರ್ ಪಾಲ್ಗೊಂಡು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಶಾಸಕರು ಬಿಜೆಪಿಗೆ ಹೋಗದಂತೆ ತಡೆಯಲು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚಿಸಿದ್ದು, ಯಾರು ಔಟ್, ಯಾರು ಇನ್ ಎನ್ನುವ ಬಗ್ಗೆಯೂ ಕೂಡ ಮಾತುಕತೆ ನಡೆಸಲಾಗಿದೆ. 

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯದಲ್ಲಿ 25 ಸ್ಥಾನ ಗಳಿಸಿದ್ದು, ಇದೇ ವೇಳೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವ ಮಾತುಗಳು ಕೇಳಿಬರುತ್ತಿದೆ. 

ಈ ನಿಟ್ಟಿನಲ್ಲಿ ಮೂರುಗಳ ಕಾಲ ಸಭೆ ನಡೆಸಿ ಗಂಭೀರ ಚರ್ಚೆ ನಡೆಸಿ ಸರ್ಕಾರ ಉಳಿಸಲು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವ  ಗಂಭಿರ ಚಿಂತನೆ ನಡೆಸಿದ್ದಾರೆ. 

ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ನಾಳೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜ್ಯಕ್ಕೆ ಕೆಸಿ ವೇಣುಗೋಪಾಲ ರಾವ್ ಆಗಮಿಸಲಿದ್ದಾರೆ. ಅವರ ಬಳಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. 

ಕಾಂಗ್ರೆಸ್ ನಲ್ಲಿ ಯಾರಿಗೂ ಕೂಡ ಅಸಮಾಧಾನ ಇಲ್ಲ. ಪಕ್ಷ ಬಿಡುತ್ತಾರೆ ಎನ್ನುವ ವಿಚಾರವು ಸತ್ಯಕ್ಕೆ ದೂರವಾದುದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.