ನವದೆಹಲಿ/ ಚೆನ್ನೈ (ಸೆ,10): ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ತಲೆದೋರಿರುವ ಕಾವೇರಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಬಗ್ಗೆ ಕಾಂಗ್ರೆಸ್ ನಾಯಕರೇ ಅಪಸ್ವರ ಎತ್ತಿದ್ದಾರೆ..

 ಸುಪ್ರೀಂ ಕೋರ್ಟ್ ಒಮ್ಮೆ ಆದೇಶವನ್ನು ನೀಡಿದ ಬಳಿಕ, ಅದನ್ನು ತಡೆಯುವ ನೇರ ಅಥವಾ ಪರೋಕ್ಷ ಪ್ರಯತ್ನಗಳು ಅಸಾಂವಿಧಾನಿಕವಾಗಿರುವುದು ಎಂದು ಕಾಂಗ್ರೆಸ್ ಮುಖಂಡ ಅಭಿಶೇಕ್ ಮನು ಸಿಂಘ್ವಿ ಹೇಳಿದ್ದಾರೆಂದು ವರದಿಯಾಗಿದೆ.

ಅದೇ ವೇಳೆ ತಮಿಳುನಾಡಿನ ಕಾಂಗ್ರೆಸ್ ಮುಖಂಡರು ಕೂಡಾ, ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿಗೆ ಪತ್ರ ಬರೆದು ಮುಖ್ಯಮಂತ್ರಿಗಳ ಸಭೆ ಕರೆಯಲು ಮನವಿ ಮಾಡುವುದು ಸರಿಯಲ್ಲ, ಎಂದಿದ್ದಾರೆ.

ಕಾವೇರಿ ವಿಚಾರವು ಈಗಾಗಲೇ ಸುಪ್ರೀಂ ಕೋರ್ಟ'ನಲ್ಲಿರುವುದರಿಂದ, ಪ್ರಧಾನಿ ಮಧ್ಯಪ್ರವೇಶಿಸಲು ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಸೂಚಿಸಿದರೆ ಮಾತ್ರ ಪ್ರಧಾನಿ ಸಭೆ ಕರೆಯಬಹುದೇ ಹೊರತು ಮುಖ್ಯಮಂತ್ರಿ ಮನವಿಯ ಮೇರೆಗೆ ಅಲ್ಲ, ಎಂದು ಕಾಂಗ್ರೆಸ್ ಮುಖಂಡ ಪೀಟರ್ ಅಲ್ಫೋನ್ಸ್ ಹೇಳಿದ್ದಾರೆ.