Asianet Suvarna News Asianet Suvarna News

ಜೆಡಿಎಸ್‌ ಟಾರ್ಗೆಟ್‌ಗೆ ಕಾಂಗ್ರೆಸ್‌ನಲ್ಲಿ ಮೂಡಿದೆ ಭಾರೀ ಆತಂಕ!

ಜೆಡಿಎಸ್ ಮಾಡಿಕೊಂಡಿರುವ ಈ ಟಾರ್ಗೆಟ್ ಒಂದು ಇದೀಗ ಕಾಂಗ್ರೆಸ್ ನಾಯಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜೆಡಿಎಸ್ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶವನ್ನು ಇರಿಸಿಕೊಂಡಿದ್ದು ಇದರಿಂದ ಕಾಂಗ್ರೆಸ್ ಹೆಚ್ಚು ಚಿಂತಿಸುವಂತೆ ಮಾಡಿದೆ. 

Congress Leaders Anxiety Over JDS Target
Author
Bengaluru, First Published Aug 30, 2018, 8:33 AM IST

ಬೆಂಗಳೂರು :  ಸಮ್ಮಿಶ್ರ ಸರ್ಕಾರದಲ್ಲಿ ಹುಟ್ಟಿಕೊಂಡಿರುವ ಆಂತರಿಕ ತುಮುಲಕ್ಕೆ ಮೂಲ ಕಾರಣ ಜೆಡಿಎಸ್‌ನ ಟಾರ್ಗೆಟ್‌ 70 ಸೂತ್ರ!

ಹೀಗಂತ ಹೇಳುತ್ತವೆ ಕಾಂಗ್ರೆಸ್‌ನ ಉನ್ನತ ಮೂಲಗಳು. ಈ ಮೂಲಗಳ ಪ್ರಕಾರ ಜೆಡಿಎಸ್‌ ನಾಯಕರು ನಡೆಸುತ್ತಿರುವ ಎಪ್ಪತ್ತರ ಆಟಕ್ಕೆ ಹಲವು ಕಾಂಗ್ರೆಸ್‌ ಶಾಸಕರ ಜಂಘಾಬಲ ಉಡುಗಿದೆ. ಈ ಸೂತ್ರವನ್ನು ಯಶಸ್ವಿಯಾಗಲು ಬಿಟ್ಟರೆ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಕಾಯಂ ಎರಡನೇ ಸ್ಥಾನಕ್ಕೆ ಕುಸಿಯಲಿದ್ದು, ಅಧಿಕಾರ ಪಡೆಯಲು ಜೆಡಿಎಸ್‌ ಆಶ್ರಯ ಅನಿವಾರ್ಯವಾಗುವಂತಹ ಸನ್ನಿವೇಶ ಭವಿಷ್ಯದಲ್ಲೂ ನಿರ್ಮಾಣವಾಗಬಹುದು ಎಂಬ ಭೀತಿ ಕಾಂಗ್ರೆಸ್‌ ನಾಯಕತ್ವಕ್ಕೂ ಹುಟ್ಟಿಕೊಂಡಿದೆ.

ಹೀಗಾಗಿಯೇ ಕಾಂಗ್ರೆಸ್‌ನ ಒಂದು ದಂಡು, ಜೆಡಿಎಸ್‌ನ ಈ ಟಾರ್ಗೆಟ್‌ 70 ಕಾರ್ಯಯೋಜನೆಯನ್ನು ವಿಫಲಗೊಳಿಸುವ ಮತ್ತು ಕಾಂಗ್ರೆಸ್‌ ಹೈಕಮಾಂಡ್‌ಗೆ ಜೆಡಿಎಸ್‌ ತಳಮಟ್ಟದಲ್ಲಿ ಮುಗುಂ ಆಗಿ ನಡೆಸಿರುವ ಒಳತಂತ್ರಗಳು ಮನದಟ್ಟಾಗುವಂತೆ ಮಾಡಲು ಮುಂದಾಗಿದೆ. ಇಂತಹ ಪ್ರಯತ್ನ ಕಾಂಗ್ರೆಸ್‌ ನಾಯಕತ್ವದಿಂದ ಆರಂಭವಾಗಿರುವುದರ ಅಡ್ಡ ಪರಿಣಾಮವೇ- ಸರ್ಕಾರದಲ್ಲಿ ಏನೋ ನಡೆದಿದೆ, ಸಿದ್ದರಾಮಯ್ಯ ಯುರೋಪ್‌ಗೆ ಹೋದಾಗ ಸರ್ಕಾರ ಬಿದ್ದುಹೋಗುತ್ತದೆ ಎಂಬ ಭಾವ ಬಿತ್ತನೆ ಮತ್ತು ಮೈತ್ರಿ ಸರ್ಕಾರದಲ್ಲಿ ಭಾರಿ ತುಮುಲದ ಸೃಷ್ಟಿ.

ಇಷ್ಟಕ್ಕೂ ಈ ಟಾರ್ಗೆಟ್‌ 70 ಎಂದರೆ, ಜೆಡಿಎಸ್‌ 70 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಸ್ಥಳೀಯ ನಾಯಕತ್ವವನ್ನು ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬೆಳೆಸುವ ಕಾರ್ಯತಂತ್ರ. ಉದ್ದೇಶ- ಈ ನಾಯಕತ್ವವನ್ನು ಪ್ರಬಲಗೊಳಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ತನ್ನ ಸಂಖ್ಯೆಯನ್ನು 70ಕ್ಕೆ ಹೆಚ್ಚಿಸಿಕೊಳ್ಳುವುದು. ಜೆಡಿಎಸ್‌ ಸ್ಥಾನ 70 ಮುಟ್ಟಿದರೆ ಆಗ ಮತ್ತೆ ಸಮ್ಮಿಶ್ರ ಸರ್ಕಾರ ಅನಿವಾರ್ಯ. ಕಾಂಗ್ರೆಸ್‌ ಅಥವಾ ಬಿಜೆಪಿ ಪಕ್ಷಗಳು ಸರ್ಕಾರ ರಚಿಸಲು ಜೆಡಿಎಸ್‌ ಆಶ್ರಯ ಪಡೆಯಲೇಬೇಕು.

ಆದರೆ, ಜೆಡಿಎಸ್‌ ಗುರಿಯಿಟ್ಟಿರುವ ಈ 70 ಕ್ಷೇತ್ರಗಳ ಪೈಕಿ ಸುಮಾರು 25ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಹಾಲಿ ಇರುವುದು ಕಾಂಗ್ರೆಸ್‌ ಶಾಸಕರು. ಈ ಕ್ಷೇತ್ರಗಳಲ್ಲಿ ನಡೆಯುವ ಬಹುತೇಕ ಯೋಜನೆ, ಕಾಮಗಾರಿ ಮತ್ತು ವರ್ಗಾವಣೆಯಲ್ಲಿ ಸ್ಥಳೀಯ ಜೆಡಿಎಸ್‌ ನಾಯಕರ ಮಾತಿಗೆ ಮನ್ನಣೆ ದೊರೆಯುತ್ತಿದೆ. ಕಾಂಗ್ರೆಸ್‌ ಶಾಸಕರ ಮಾತಿಗೆ ಬೆಲೆಯೇ ದೊರೆಯುತ್ತಿಲ್ಲ ಎಂಬುದು ದೂರು. ಈ ದೂರನ್ನು ಹೊತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಬಳಿ ಸತತವಾಗಿ ಮೊರೆಯಿಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಕಾಂಗ್ರೆಸ್‌ ಶಾಸಕರ ಅಳಲು.

ಇದರ ಪರಿಣಾಮ ಈ ಶಾಸಕರು ಸಿದ್ದರಾಮಯ್ಯ ಅವರನ್ನು ಆಶ್ರಯಿಸಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯ ಕೂಡ ಶಾಸಕರ ಸಮಸ್ಯೆ ಬಗೆಹರಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಕಂಗೆಟ್ಟಈ ಶಾಸಕರ ತಂಡವೊಂದು ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಇದರಿಂದ ಪಕ್ಷದ ಮೇಲೆ ಉಂಟಾಗಬಹುದಾದ ಪರಿಣಾಮದ ಬಗ್ಗೆ ಹೈಕಮಾಂಡ್‌ ಗಮನ ಸೆಳೆಯಲು ನಿಯೋಗದಲ್ಲಿ ದೆಹಲಿಗೆ ತೆರಳಲು ಸಜ್ಜಾಗಿತ್ತು ಎನ್ನಲಾಗಿದೆ. ಆದರೆ, ಶಾಸಕರ ಈ ಪ್ರಯತ್ನವನ್ನು ಸಿದ್ದರಾಮಯ್ಯ ತಡೆದಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆವರೆಗೂ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗಬಾರದು ಎಂಬ ಸ್ಪಷ್ಟಸೂಚನೆಯನ್ನು ಹೈಕಮಾಂಡ್‌ ನೀಡಿರುವುದರಿಂದ ರಾಜ್ಯದ ಯಾವ ನಾಯಕರೂ ಪಕ್ಷದ ಶಾಸಕರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಸ್ಥಳೀಯವಾಗಿ ತಮ್ಮನ್ನು ವಿರೋಧಿಸುವ ಜೆಡಿಎಸ್‌ನ ನಾಯಕರು ಸರ್ಕಾರದ ಒತ್ತಾಸೆಯ ಪರಿಣಾಮವಾಗಿ ಪ್ರಭಾವಿಗಳಾಗಿ ಬೆಳೆಯುತ್ತಿರುವುದರಿಂದ ಲೋಕಸಭಾ ಚುನಾವಣೆ ಮುಗಿಯುವವರೆಗೆ ಸುಮ್ಮನೆ ಕೂರಲು ಕಾಂಗ್ರೆಸ್‌ ಶಾಸಕರಿಂದಲೂ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ತಂತ್ರದ ಬಿಸಿ ಹೈಕಮಾಂಡ್‌ಗೂ ತಟ್ಟುವಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.

ಇದಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಬೆಂಗಳೂರು ಮೇಯರ್‌ ಚುನಾವಣೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತವೆ. ಕಾಂಗ್ರೆಸ್‌ ನಾಯಕರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅತ್ಯಂತ ಸಕ್ರಿಯವಾಗಿಯೇ ತೊಡಗಿಕೊಂಡಿದ್ದಾರೆ. ಆದಾಗ್ಯೂ, ಜೆಡಿಎಸ್‌ ಟಾರ್ಗೆಟ್‌ ಮಾಡಿಕೊಂಡಿರುವ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್‌ ಸಾಧನೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದೇ ರೀತಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯ ಗೆಲುವಿಗೆ ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುವ ಸಂದರ್ಭವಿದೆ.

ಈ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೆ ಆಗ ಹೈಕಮಾಂಡ್‌ ರಾಜ್ಯ ನಾಯಕತ್ವವನ್ನು ಕಾರಣ ಕೇಳುತ್ತದೆ. ಆಗ ಜೆಡಿಎಸ್‌ನ ಒಳತಂತ್ರಗಳನ್ನು ಬಿಚ್ಚಿಟ್ಟು ಪಕ್ಷವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಬಹುದು ಎಂಬುದು ಈ ತಂಡದ ಯೋಜನೆ.

ಹೀಗೆ ಕಾಂಗ್ರೆಸ್‌ನ ಒಂದು ಬಣವು ಹೈಕಮಾಂಡ್‌ಗೆ ವಸ್ತುಸ್ಥಿತಿಯನ್ನು ಮನಗಾಣಿಸಲು ಸಜ್ಜಾಗುತ್ತಿರುವುದರ ಹಾಗೂ ಕಾಂಗ್ರೆಸ್‌ ಶಾಸಕರು ಸಿದ್ದರಾಮಯ್ಯ ಅವರಡಿಯಲ್ಲಿ ಒಗ್ಗೂಡುತ್ತಿದ್ದಾರೆ ಎಂಬ ಸುಳಿವು ಪಡೆದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಖಾಸಗಿ ಲೇವಾದೇವಿಯವರಿಂದ ಪಡೆದ ಸಾಲ ಮನ್ನಾದಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಸರ್ಕಾರದ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಹೈಕಮಾಂಡ್‌ನೊಂದಿಗೆ ನೇರಾನೇರ ಮಾತುಕತೆ ನಡೆಸುವ ಪ್ರಯತ್ನವನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಬಿಜೆಪಿ ಕೂಡ ಸಕ್ರಿಯವಾಗಿದ್ದು, ಅಸಮಾಧಾನಗೊಂಡಿರುವ ಕಾಂಗ್ರೆಸ್‌ನ 15ಕ್ಕೂ ಹೆಚ್ಚು ಶಾಸಕರೊಂದಿಗೆ ಸಂಪರ್ಕ ಸಾಧಿಸಿದೆ ಎನ್ನಲಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಏನೋ ನಡೆಯುತ್ತಿದೆ ಎಂಬ ಮಾತುಗಳು ಹುಟ್ಟಿಕೊಂಡಿವೆ. ಆದರೆ, ಹೈಕಮಾಂಡ್‌ ನೇರ ನಿರ್ಧಾರ ಕೈಗೊಳ್ಳದ ಹೊರತು ಕಾಂಗ್ರೆಸ್‌ ನಾಯಕರು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳುತ್ತವೆ.

Follow Us:
Download App:
  • android
  • ios