ಬೆಂಗಳೂರು :  ಐಎಂಎ ವಂಚನೆ ಪ್ರಕರಣದಲ್ಲಿ ಮೊಹಮ್ಮದ್‌ ಮನ್ಸೂರ್‌ ಖಾನ್‌ರದ್ದು ಎನ್ನಲಾದ ಆಡಿಯೋದಲ್ಲಿ ರೋಷನ್‌ ಬೇಗ್‌ ಅವರ ಹೆಸರು ಕೇಳಿಬಂದಿದೆ. ಆದರೆ, ಆಡಿಯೋ ನಕಲಿಯೋ ಅಸಲಿಯೋ ಎಂಬುದೇ ಇನ್ನೂ ಸಾಬೀತಾಗಿಲ್ಲ. ಈ ಬಗ್ಗೆ ತನಿಖೆ ನಡೆದರೆ ಮಾತ್ರ ಸತ್ಯಾಂಶಗಳು ಹೊರಬರಲಿವೆ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಷನ್‌ ಬೇಗ್‌ ಅವರು ಕ್ಷೇತ್ರದ ಶಾಸಕರಾಗಿ ಮನ್ಸೂರ್‌ ಖಾನ್‌ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿರಬಹುದು. ರಾಜಕಾರಣಿಗಳು ಯಾರು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಹೋಗಬೇಕಾಗುತ್ತದೆ. ಆಡಿಯೋದಲ್ಲಿ ಹೆಸರು ಕೇಳಿಬಂದಿದೆ ಎಂದ ಮಾತ್ರಕ್ಕೆ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಮನ್ಸೂರ್‌ ಖಾನ್‌ ಅವರದ್ದು ಎನ್ನಲಾದ ಮೊದಲ ಆಡಿಯೋ ಹಾಗೂ ನಂತರದ ಆಡಿಯೋಗೆ ಸಾಕಷ್ಟುವ್ಯತ್ಯಾಸ ಇದೆ. ಎರಡೂ ಆಡಿಯೋದಲ್ಲಿ ಬೇರೆ ಬೇರೆ ಧ್ವನಿಗಳಿವೆ. ನನ್ನ ಬಗ್ಗೆಯೂ ಆರೋಪಗಳು ಕೇಳಿಬಂದಿವೆ. ಜತೆಗೆ ರೋಷನ್‌ ಬೇಗ್‌ ಅವರ ಬಗ್ಗೆಯೂ ಆರೋಪ ಕೇಳಿಬಂದಿದೆ. ಇವೆಲ್ಲದಕ್ಕೂ ತನಿಖೆ ನಡೆದ ಬಳಿಕ ಹಾಗೂ ಮನ್ಸೂರ್‌ ಖಾನ್‌ ವಾಪಸು ಬಂದ ಬಳಿಕವಷ್ಟೇ ಸ್ಪಷ್ಟಉತ್ತರ ಸಿಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.