ರಾಹುಲ್‌ ಆಗಮನಕ್ಕೆ ಕಾದಿದ್ದಾರೆ ಕಾಂಗ್ರೆಸ್ಸಿಗರು

news | Sunday, June 3rd, 2018
Suvarna Web Desk
Highlights

ಆಕಾಂಕ್ಷಿಗಳ ತೀವ್ರ ಒತ್ತಡ ಹಿನ್ನೆಲೆಯಲ್ಲಿ ಕಗ್ಗಂಟಾಗಿ ಪರಿಣಮಿಸಿರುವ ಖಾತೆ ಹಂಚಿಕೆಯು ಬಹುತೇಕ ಹೈಕಮಾಂಡ್‌ ಸಮ್ಮುಖದಲ್ಲೇ ಬಗೆಹರಿಯಬೇಕಾದ ಅನಿವಾರ್ಯ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ವಿದೇಶ ಪ್ರವಾಸದಿಂದ ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗಿರುವ ರಾಹುಲ್‌ ಗಾಂಧಿ ಅವರು ವಿದೇಶದಿಂದ ಹಿಂತಿರುಗಿದ ಕೂಡಲೇ ರಾಜ್ಯ ನಾಯಕತ್ವ ದೆಹಲಿಗೆ ತೆರಳುವ ಸಾಧ್ಯತೆಯಿದೆ.

ಬೆಂಗಳೂರು (ಜೂ. 03):  ಆಕಾಂಕ್ಷಿಗಳ ತೀವ್ರ ಒತ್ತಡ ಹಿನ್ನೆಲೆಯಲ್ಲಿ ಕಗ್ಗಂಟಾಗಿ ಪರಿಣಮಿಸಿರುವ ಖಾತೆ ಹಂಚಿಕೆಯು ಬಹುತೇಕ ಹೈಕಮಾಂಡ್‌ ಸಮ್ಮುಖದಲ್ಲೇ ಬಗೆಹರಿಯಬೇಕಾದ ಅನಿವಾರ್ಯ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ವಿದೇಶ ಪ್ರವಾಸದಿಂದ ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗಿರುವ ರಾಹುಲ್‌ ಗಾಂಧಿ ಅವರು ವಿದೇಶದಿಂದ ಹಿಂತಿರುಗಿದ ಕೂಡಲೇ ರಾಜ್ಯ ನಾಯಕತ್ವ ದೆಹಲಿಗೆ ತೆರಳುವ ಸಾಧ್ಯತೆಯಿದೆ.

ಕಾಂಗ್ರೆಸ್‌ನಲ್ಲಿ ಹಲವು ಬಾರಿ ಸಚಿವ ಸ್ಥಾನ ಅನುಭವಿಸಿರುವ ಹಿರಿಯರಿಗೆ ಈ ಬಾರಿ ಸಚಿವ ಸ್ಥಾನ ನೀಡಬಾರದು. ಬದಲಾಗಿ ಶಾಸಕರಾಗಿ ಎರಡಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗಿರುವವರಿಗೆ ಪ್ರಾಧಾನ್ಯತೆ ನೀಡಬೇಕು ಎಂಬ ಒತ್ತಡ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಮಂದಿ ಮಾತ್ರ ಹಿರಿಯರು, ಉಳಿದಂತೆ ಕಿರಿಯರ ಹೆಸರು ಇರುವ ಮತ್ತು ಸಾಮಾನ್ಯದಂತೆ ಹಿರಿಯ ಸಚಿವರು ಹೆಚ್ಚಿರುವ ಎರಡು ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿದೆ.

ಈ ಪಟ್ಟಿಯೊಂದಿಗೆ ಕಾಂಗ್ರೆಸ್‌ ನಾಯಕತ್ವ ದೆಹಲಿಗೆ ತೆರಳಿ ಹೈಕಮಾಂಡ್‌ ಜತೆ ಚರ್ಚೆ ನಡೆಸಲಿದೆ. ಈ ಎರಡು ಪಟ್ಟಿಪೈಕಿ ರಾಹುಲ್‌ ಗಾಂಧಿ ಅವರು ಯಾವ ಪಟ್ಟಿಗೆ ತಮ್ಮ ಒಪ್ಪಿಗೆ ಸೂಚಿಸುವರೋ ಆ ಪಟ್ಟಿಯಲ್ಲಿರುವರಿಗೆ ಸಚಿವ ಸ್ಥಾನ ಲಭಿಸಲಿದೆ ಎನ್ನಲಾಗಿದೆ. ಒಂದು ವೇಳೆ ಇನ್ನೆರಡು ದಿನದಲ್ಲಿ ರಾಹುಲ್‌ ಸ್ವದೇಶಕ್ಕೆ ಮರಳದಿದ್ದರೆ ಫೋನ್‌ನಲ್ಲೇ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಕೂಡ ಇದೆ ಎಂದು ತಿಳಿದುಬಂದಿದೆ.

ಖಾಲಿ ಬಿಡಬೇಕಾ?:

ಇದೇ ವೇಳೆ ಬುಧವಾರ ನಡೆಯುವ ಸಂಪುಟ ವಿಸ್ತರಣೆ ವೇಳೆ ಎಷ್ಟುಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆಯೂ ಕಾಂಗ್ರೆಸ್‌ನಲ್ಲಿ ಗೊಂದಲವಿದೆ. ಕೇವಲ ಎರಡು ಸ್ಥಾನಗಳನ್ನು ಖಾಲಿಯಿಟ್ಟು ಉಳಿದವುಗಳನ್ನು ಭರ್ತಿ ಮಾಡಿಕೊಳ್ಳಬೇಕೋ ಅಥವಾ ಪಕ್ಷೇತರರು ಸೇರಿ 12 ಮಂದಿಯನ್ನು ಈ ಬಾರಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಉಳಿದ ಸ್ಥಾನಗಳನ್ನು ಖಾಲಿಯಿಡಬೇಕು ಎಂಬ ಗೊಂದಲವಿದೆ. ಇದು ಕೂಡ ಹೈಕಮಾಂಡ್‌ ಸಮ್ಮುಖದಲ್ಲಿ ತೀರ್ಮಾನವಾಗಬೇಕು.

ದುಂಬಾಲು:

ಈ ನಡುವೆ, ಸಚಿವ ಸ್ಥಾನ ಆಕಾಂಕ್ಷಿಗಳು ಹಿರಿಯ ನಾಯಕರ ನಿವಾಸಗಳಿಗೆ ಭೇಟಿ ನೀಡಿ ಸಚಿವ ಸ್ಥಾನಕ್ಕಾಗಿ ದುಂಬಾಲು ಬೀಳುವ ಕಸರತ್ತು ಮುಂದುವರೆಸಿದ್ದಾರೆ. ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಈಶ್ವರ್‌ ಖಂಡ್ರೆ, ಜಮೀರ್‌ ಅಹ್ಮದ್‌ಖಾನ್‌, ರಿಜ್ವಾನ್‌ ಅರ್ಷದ್‌, ರಾಘವೇಂದ್ರ ಹಿಟ್ನಾಳ್‌, ಪಕ್ಷೇತರ ಶಾಸಕ ಶಂಕರ್‌ ಸೇರಿ ಹಲವರು ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ಮನವಿ ಮಾಡಿದರು. ಇದೇ ರೀತಿ ಪರಮೇಶ್ವರ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿಯೂ ಶಾಸಕರ ದಂಡು ಕಂಡು ಬಂತು. 

Comments 0
Add Comment

    Related Posts

    Ex Mla Refuse Congress Ticket

    video | Friday, April 13th, 2018
    Shrilakshmi Shri