ಕಲಬುರಗಿ :  ಮಾಜಿ ಸಚಿವ, ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ ಅವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ ಎನ್ನುವಾಗ ನಡೆದಿರುವ ಈ ಬೆಳವಣಿಗೆ ಕಾಂಗ್ರೆಸ್‌ ಪಕ್ಷ ಸಂಘಟನೆ ವಿಚಾರದಲ್ಲಿ ಹೈ-ಕ ಮಟ್ಟಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

371 (ಜೆ) ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಈ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಈ ಬಗ್ಗೆ ಗಮನಕ್ಕೂ ತಂದರೂ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಅನುದಾನ ಪೂರ್ಣವಾಗಿ ಖರ್ಚಾಗುತ್ತಿಲ್ಲ. ಇದರಿಂದ ನೊಂದು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ರವಾನಿಸಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ನಮಗೆ ಯಾವುದೇ ವಿಧದಲ್ಲಿ ಬೆಲೆ ದೊರಕುತ್ತಿಲ್ಲ ಎಂದು ಪಾಟೀಲರು ಅಸಮಾಧಾನದಲ್ಲಿದ್ದರು. ಲೋಕಸಭೆ ಚುನಾವಣೆ ಹಂತದಲ್ಲೇ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಜಿಲ್ಲಾ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 

ಈ ಬಾರಿಯ ಲೋಕಸಭೆ ಸಮರದಲ್ಲಿ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಕಣಕ್ಕಿಳಿಯುತ್ತಿರುವದರಿಂದ ವೈಜನಾಥ ಪಾಟೀಲರು ಬರುವ ದಿನಗಳಲ್ಲಿ ತಮ್ಮ ಬೆಂಬಲವನ್ನು ಡಾ.ಜಾಧವ ಪರ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ಆದರೂ ವೈಜನಾಥ ಪಾಟೀಲರು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.