ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಮಾ.1ರಿಂದ ರಾಜ್ಯದ ಕಾಂಗ್ರೆಸ್ ನಾಯಕರೆಲ್ಲಾ ಒಟ್ಟಾಗಿ ರಾಜ್ಯಾದ್ಯಂತ ಬಸ್ಸಿನ ಮೂಲಕ ಯಾತ್ರೆ ನಡೆಸಲಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್ ಪ್ರತ್ಯೇಕವಾಗಿ ಪ್ರವಾಸ ನಡೆಸುತ್ತಿದ್ದು, ಮಾ.1ರಿಂದ ಎಲ್ಲರೂ ಒಟ್ಟಾಗಿ ಪ್ರವಾಸ ನಡೆಸಲು ರಾಹುಲ್‌ಗಾಂಧಿ ಹಸಿರು ನಿಶಾನೆ ತೋರಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು (ಜ.14): ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಮಾ.1ರಿಂದ ರಾಜ್ಯದ ಕಾಂಗ್ರೆಸ್ ನಾಯಕರೆಲ್ಲಾ ಒಟ್ಟಾಗಿ ರಾಜ್ಯಾದ್ಯಂತ ಬಸ್ಸಿನ ಮೂಲಕ ಯಾತ್ರೆ ನಡೆಸಲಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್ ಪ್ರತ್ಯೇಕವಾಗಿ ಪ್ರವಾಸ ನಡೆಸುತ್ತಿದ್ದು, ಮಾ.1ರಿಂದ ಎಲ್ಲರೂ ಒಟ್ಟಾಗಿ ಪ್ರವಾಸ ನಡೆಸಲು ರಾಹುಲ್‌ಗಾಂಧಿ ಹಸಿರು ನಿಶಾನೆ ತೋರಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಎಸ್.ಎಂ. ಕೃಷ್ಣ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿದ್ದಾಗ ಪಾಂಚಜನ್ಯ ಯಾತ್ರೆ ನಡೆಸಿದ್ದರು. ಇದೇ ಸ್ವರೂಪದಲ್ಲಿ ರಾಜ್ಯ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ನಡೆಸಲಿದ್ದಾರೆ.

ರಾಹುಲ್‌ಗಾಂಧಿ ಜತೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಮಾತುಕತೆ ನಡೆದಿದ್ದು ಮಾರ್ಚ್’ನಲ್ಲಿ ಬಸ್ಸಿನಲ್ಲಿ ರಾಜ್ಯಪ್ರವಾಸ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಯಾತ್ರೆಯ ಹೆಸರು ಹಾಗೂ ಸ್ವರೂಪ ಹೇಗಿರಬಹುದು ಎಂಬುದರ ಬಗ್ಗೆ ಕಾಂಗ್ರೆಸ್ ನಾಯಕರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ.

ಇದೇ ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದಲ್ಲಿಯೇ ಚುನಾವಣೆಯನ್ನು ಎದುರಿಸಬೇಕು. ಬಿಜೆಪಿಯ ಕೋಮುವಾದ, ಜಾತಿವಾದದ ಜಾಲದಲ್ಲಿ ಸಿಲುಕಿಕೊಳ್ಳದೆ ‘ಒಗ್ಗಟ್ಟಿನ ಮಂತ್ರ’ ಜಪಿಸುವ ಮೂಲಕ ಚುನಾವಣೆ ಎದುರಿಸುವಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ದೆಹಲಿಯ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರ ಜತೆ ಸಭೆ ನಡೆಸಿದ ಅವರು, ರಾಜ್ಯ ಕಾಂಗ್ರೆಸ್‌ನ ಚುನಾವಣಾ ಸಿದ್ಧತೆ ಮತ್ತು ಚುನಾವಣಾ ಅಭಿಯಾನದ ದಿಕ್ಸೂಚಿ ಬಗ್ಗೆ ಮಾರ್ಗದರ್ಶನ ಮಾಡಿದರು.

ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದಲ್ಲಿಯೇ ಚುನಾವಣೆಯನ್ನು ಎದುರಿಸಬೇಕು. ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಬೇಕು. ಬಿಜೆಪಿಯ ಧ್ರುವೀಕರಣ, ಕೋಮುವಾದ, ಜಾತಿವಾದದ ರಾಜಕಾರಣದ ಜಾಲದಲ್ಲಿ ಸಿಳುಕಬೇಡಿ. ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಚುನಾವಣೆ ಗೆದ್ದರೆ ಕಾಂಗ್ರೆಸ್ ಮಾಡುವ ಕೆಲಸಗಳಿಗೆ ಬದ್ಧವಾಗಿ ಚುನಾವಣಾ ರಣ ನೀತಿ ಸಿದ್ಧಪಡಿಸಿ ಎಂದು ರಾಹುಲ್ ತಿಳಿಸಿದರು.

ಯಾವುದೇ ವಿವಾದಗಳು ಸೃಷ್ಟಿಯಾದಾಗ ಅಥವಾ ಎಲ್ಲ ಸಂದರ್ಭದಲ್ಲಿಯೂ ಪಕ್ಷದ ನಾಯಕರು ಪರಸ್ಪರರ ರಕ್ಷಣೆಗೆ ಇಳಿಯಬೇಕು. ಯಾವುದೋ ಒಂದು ಘಟನೆಗೆ ಕೆಲವರು ಮಾತ್ರ ಮಾತನಾಡುವುದು, ಸಿಎಂ ಮಾತ್ರ ಪ್ರತಿಕ್ರಿಯಿಸುವುದು ಆಗಬಾರದು. ಎಲ್ಲರೂ ಕೂಡ ಪರಸ್ಪರರ ರಕ್ಷಣೆಗೆ ಕಟಿಬದ್ಧವಾಗಿದ್ದು ಸರ್ಕಾರ ಮತ್ತು ಪಕ್ಷವನ್ನು ಸಮರ್ಥಿಸಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಜತೆಗೆ ಲೋಕಸಭೆ ಯಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿಯ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫರ್ನಾಂಡಿಸ್, ಬಿ. ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೆಪಿಸಿಸಿಯ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್, ಮಾಜಿ ಸಚಿವರಾದ ಕೆ. ಎಚ್. ಮುನಿಯಪ್ಪ, ರೆಹಮಾನ್ ಖಾನ್, ಕರ್ನಾಟಕದ ಉಸ್ತುವಾರಿ ಕಾರ್ಯದರ್ಶಿ ಗಳು ಭಾಗವಹಿಸಿದ್ದರು.