ಕಲಬುರಗಿ, [ನ.07]: ಕಲಬುರಗಿ ಕಾಂಗ್ರೆಸ್ ನಾಯಕನ ಪುತ್ರನೊಬ್ಬ ಖಾಸಗಿ ಕಾಲೇಜಿನ ಪ್ರಾಂಶುಪಾಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾನೆ.

ಕಲಬುರಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವಯ್ಯ ಗುತ್ತೇದಾರ್ ಅವರ ಪುತ್ರ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ರಾಜೇಶ್ ಅವರು ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್ ಮಹೇಶ್​ ರಾಥೋಡ್​ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. 

ಈ ಬಗ್ಗೆ ಸ್ವತಃ ಪ್ರಾಂಶುಪಾಲ ಮಹೇಶ್​ ರಾಥೋಡ್​ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ  ದೂರು ನೀಡಲು ಮುಂದಾಗಿದ್ದಾರೆ. ಆದರೆ, ರಾಜಕೀಯ ಒತ್ತಡಕ್ಕೆ ಪೊಲೀಸರು ಎಫ್​ಐಆರ್​​ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಾಂಶುಪಾಲ ಮಹೇಶ್​ ರಾಥೋಡ್​ ಆರೋಪಿಸಿದ್ದಾರೆ.

ನ.5ರಂದು ಗಣೇಶ್ ನಗರದಲ್ಲಿ ತನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದರ ಜತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪ್ರಾಂಶುಪಾಲರು ದೂರು ನೀಡಿದ್ದಾರೆ. 

ರಾಜೇಶ್ ಮನೆಗೆ ತೆರಳುವಾಗ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್​​ ತೆಗೆಯುವಂತೆ ಕಾಲೇಜು ಹುಡುಗರಿಗೆ ಸೂಚಿಸಿದ್ದಾರೆ. ಹಾರ್ನ್ ಮಾಡಿದ ತಕ್ಷಣ ಕಾರು ತೆಗೆದಿಲ್ಲ ಎಂದು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ.

ಕಾಲೇಜು ಹೊರಗೆ ನಡೆಯುತ್ತಿರುವ ಗಲಾಟೆ ಕಂಡು ಹೊರಗೆ ಬಂದು ವಿಚಾರಿಸಿದಾಗ ಅವಾಚ್ಯ ಶಬ್ದಗಳನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಹೇಶ್​ ರಾಥೋಡ್​ ದೂರಿನಲ್ಲಿ ತಿಳಿಸಿದ್ದಾರೆ.