ನವದೆಹಲಿ [ಜೂ.19] : ಜಿಂದಾಲ್ ವಿವಾದ ಬಗ್ಗೆ ಎಚ್.ಕೆ. ಪಾಟೀಲ್ ಸೇರಿ ಹಿರಿಯ ಕಾಂಗ್ರೆಸ್ಸಿಗರು ಪತ್ರ ಸಮರ, ಬಹಿರಂಗ ಹೇಳಿಕೆ ನೀಡುತ್ತಿರು ವುದು ಹಾಗೂ ಇದರ ಲಾಭ ಬಿಜೆಪಿ ಪಡೆದು ಸಮ್ಮಿಶ್ರ ಸರ್ಕಾರವನ್ನು ಕೆಟ್ಟದಾಗಿ ಬಿಂಬಿಸಲು ಮುಂದಾಗಿದೆ ಎಂದು ಪಕ್ಷದ ಹೈಕಮಾಂಡ್‌ಗೆ ಶಾಸಕಾಂಗ ನಾಯಕ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಂಗಳವಾರ ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜತೆ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸುವ ವೇಳೆ ಅವರು ಜಿಂದಾಲ್ ಪ್ರಕರಣ ಮುಂದಿಟ್ಟು ಬಿಜೆಪಿ ಹೋರಾಟ ನಡೆಸಲು ಮುಂದಾಗಿರುವುದು ಹಾಗೂ ಈ ಹೋರಾಟಕ್ಕೆ ಇಂಬು ನೀಡುವಂತಹ ಹೇಳಿಕೆಗಳನ್ನು ಸ್ವಪಕ್ಷೀಯರೇ ಆದ ಎಚ್.ಕೆ. ಪಾಟೀಲ್ ಹಾಗೂ ಆನಂದ್ ಸಿಂಗ್‌ರಂತಹ ಶಾಸಕರು ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗಿದೆ.  

ಜಿಂದಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಕೈಗೊಂಡ ನಿರ್ಣಯ ಹಾಗೂ ಅನಂತರದ ಬೆಳವಣಿಗೆಗಳ ಬಗ್ಗೆ ಕೂಲಂ ಕುಷ ಮಾಹಿತಿಯನ್ನು ನೀಡಿದ ಸಿದ್ದರಾಮಯ್ಯ, ಈ ಪ್ರಕರಣ ವನ್ನು ಬಳ್ಳಾರಿ ಗಣಿ ಲೂಟಿ ಪ್ರಕರಣಕ್ಕೆ ಹೋಲಿಕೆ ಮಾಡುತ್ತಿರುವ ಬಗ್ಗೆ ತೀವ್ರ  ಆತಂಕವನ್ನು ಅವರು ವ್ಯಕ್ತಪಡಿಸಿದರು ಎನ್ನಲಾಗಿದೆ. 

ಇದಲ್ಲದೆ,  ಪಕ್ಷೇತರರ ಸಂಪುಟ ಸೇರ್ಪಡೆ, ಅವರಿಗೆ ಇನ್ನೂ ಖಾತೆ ಹಂಚಿಕೆಯಾಗದಿ ರುವುದು ಮತ್ತು ವರ್ಗಾವಣೆ ವಿಚಾರಗಳಲ್ಲಿ ಈಗಲೂ ಜೆಡಿಎಸ್ ನಾಯಕತ್ವ ಸಮ್ಮಿಶ್ರ ಧರ್ಮಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದರು ಎನ್ನಲಾಗಿದೆ.

‘ಆಪರೇಷನ್ ಕಮಲ’ ಗುಮ್ಮ: ಇದಲ್ಲದೆ, ದೇಶಾದ್ಯಂತ ಕಾಂಗ್ರೆಸ್ ಶಾಸಕರು ಪಕ್ಷ ಬಿಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಇಂತಹ ಸಾಧ್ಯತೆ ಇರುವ ಬಗ್ಗೆಯೂ ಹೈಕಮಾಂಡ್‌ಗೆ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಪ್ರೇರಿತ ಆಪರೇಷನ್ ಕಮಲ
ಇನ್ನೂ ಜಾಗೃತ ಸ್ಥಿತಿಯಲ್ಲಿದೆ. ಪಕ್ಷೇತರರ ಸಂಪುಟ ಸೇರ್ಪಡೆಯಾಗಿದ್ದರೂ ಕಾಂಗ್ರೆಸ್ ಶಾಸಕರನ್ನು ಸರ್ಕಾರದ ನೇತೃತ್ವ ವಹಿಸಿರುವವರು ಹೆಚ್ಚು ಮುತವರ್ಜಿಯಿಂದ ನಡೆಸಿಕೊಳ್ಳಬೇಕಾದ ಅಗತ್ಯ ವಿದೆ. ಕಾಂಗ್ರೆಸ್ ಶಾಸಕರಿಗೆ ಈಗಲೂ ಸರ್ಕಾರದ ನೇತೃತ್ವ ವಹಿಸಿರುವವರು ತಮ್ಮನ್ನು ನಡೆಸಿಕೊಳ್ಳುತ್ತಿ ರುವ ಬಗ್ಗೆ ಅಸಮಾಧಾನವಿದೆ. ಹೀಗಾಗಿ ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಶಾಸಕರನ್ನು ಉತ್ತಮವಾಗಿ  ನಡೆಸಿಕೊಳ್ಳುವಂತೆ ಸೂಚಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು ಎನ್ನಲಾಗಿದೆ. 

ಇಂದು ರಾಹುಲ್ ಭೇಟಿ: ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ 10.30 ಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದು, ಜಿಂದಾಲ್ ಸೇರಿದಂತೆ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ. ರಾಹುಲ್ ಭೇಟಿಯ ನಂತರ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಹಿಂತಿರುಗಲಿದ್ದಾರೆ.