ಬೆಂಗಳೂರು :  ಕಾಂಗ್ರೆಸ್ಸಲ್ಲಿ ನಾನೇ ಸಿಎಂ ಅಭ್ಯರ್ಥಿ, ಮತ್ತೆ ಸಿಎಂ ಆದರೆ ಬಡವರಿಗೆ 10 ಕೆ.ಜಿ. ಅಕ್ಕಿ ಕೊಡುತ್ತೇನೆ ಎಂದಿದ್ದಾರೆ ಸಿದ್ದರಾಮಯ್ಯ. ಸಾರ್ವಜನಿಕ ಜೀವನದಲ್ಲಿ ಇರುವ ನಮಗೆ ಬಹಳ ಜನರ ಸೀಕ್ರೆಟ್ಸ್‌ ಗೊತ್ತಿರುತ್ತೆ, ನಾನು ಚೀಫ್‌ ಮಿನಿಸ್ಟರ್‌ ಆದಾಗ ಎಲ್ಲವನ್ನೂ ಹೇಳುತ್ತೇನೆ ಅಂದಿದ್ದಾರೆ ಕಾಂಗ್ರೆಸ್‌ ನಾಯಕ, ಸಚಿವ ಡಿ.ಕೆ.ಶಿವಕುಮಾರ್‌. 

ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಆಗುತ್ತೇನೆ ಎಂದಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ. ಸಿದ್ದು ಅವರೇ ಸಿಎಂ ಅಭ್ಯರ್ಥಿ ಎಂಬುದನ್ನು ಕಾಂಗ್ರೆಸ್‌ ಸ್ಪಷ್ಟಪಡಿಸಲಿ, ಅಷ್ಟಕ್ಕೂ ಡಿಕೆಶಿ, ಪರಂ ಅವರುಗಳು ಸಿದ್ದರಾಮಯ್ಯ ಸಿಎಂ ಆಗಲು ಬಿಡುತ್ತಾರಾ ಎಂದು ವ್ಯಂಗ್ಯವಾಡಿದ್ದಾರೆ ಬಿಜೆಪಿ ನಾಯಕರು. 

ಒಟ್ಟಿನಲ್ಲಿ ಲೋಕಸಭಾ ಚುನಾವಣೆ ನಡೆದು ಮುಂದಿನ ಸರ್ಕಾರ, ಪ್ರಧಾನಿ ಯಾರೆಂಬುದು ಚರ್ಚೆಯಾಗಬೇಕಾದ ಈ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಕುರಿತ ಮಾತು ಹಠಾತ್ತನೆ ಉದ್ಭವವಾಗಿದ್ದು, ರಾಜ್ಯ ರಾಜಕೀಯದಲ್ಲಿ ಕೌತುಕಭರಿತ ಸಂಚಲನಕ್ಕೆ ಕಾರಣವಾಗಿದೆ.