ಬೆಂಗಳೂರು :  ಜಾತಿ, ಧರ್ಮಗಳ ಆಧಾರದ ಮೇಲೆ ದೇಶವನ್ನು ಒಡೆಯುತ್ತಿರುವ ನರೇಂದ್ರ ಮೋದಿಯೇ ನಿಜವಾದ ದೇಶದ್ರೋಹಿ. ಉಳಿದವರ ದೇಶಪ್ರೇಮ ಪ್ರಶ್ನಿಸುವ ಬಿಜೆಪಿಯವರೇ ನಿಜವಾದ ದೇಶಪ್ರೇಮಿಗಳಲ್ಲ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದ, ದೇಶಪ್ರೇಮಿ ಗಾಂಧಿಯನ್ನು ಕೊಂದ ಗೋಡ್ಸೆ ಅನುಯಾಯಿಗಳು ನೀಡುವ ದೇಶಪ್ರೇಮದ ಸರ್ಟಿಫಿಕೆಟ್‌ ಯಾರಿಗೆ ಬೇಕಾಗಿದೆ..!

ಹೀಗೆ, ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

ನರೇಂದ್ರ ಮೋದಿ ಅವರು ದೇಶದ ಜನರ ದುಡ್ಡಿನಲ್ಲಿ ವಿದೇಶ ಯಾತ್ರೆ ಮಾಡಿಕೊಂಡು ಆರಾಮವಾಗಿದ್ದಾರೆ. ಕಳೆದ ಐದು ವರ್ಷಗಳ ಆಡಳಿತದಲ್ಲಿ ಈವರೆಗೆ 1,690 ಕೋಟಿ ರು. ವೆಚ್ಚದಲ್ಲಿ 84 ಬಾರಿ ವಿದೇಶ ಯಾತ್ರೆ ಮಾಡಿದ್ದು, ಸುಳ್ಳು ಭಾಷಣ ಮಾಡಿದ್ದೇ ಅವರ ಸಾಧನೆಗಳಾಗಿವೆ ಎಂದು ಟೀಕಿಸಿದ್ದಾರೆ.

ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು ಬಡ ಜನರಿಗೆ ಕಡಿಮೆ ದರದಲ್ಲಿ ಆಹಾರ ಸಿಗುವಂತೆ ಮಾಡಿದರು. ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ತಂದು ಸಾಮಾಜಿಕ ಬದಲಾವಣೆಗೆ ಕಾರಣವಾದವರು ಕಾಂಗ್ರೆಸ್‌ನವರು. ಆದರೆ, ಪ್ರಧಾನಿ ಮೋದಿ ಅವರು ತಮ್ಮ ಆಡಳಿತದಲ್ಲಿ ನೋಟ್‌ ಬ್ಯಾನ್‌ ಮಾಡಿ ಜನರನ್ನು ಬೀದಿಗೆ ತಂದರು. ಅಭಿವೃದ್ಧಿ ಮತ್ತು ಸೌಹಾರ್ದತೆಯ ಅರ್ಥವೇ ಗೊತ್ತಿರದ ಬಿಜೆಪಿಯನ್ನು ಈ ಬಾರಿ ಜನರು ತಿರಸ್ಕರಿಸಲಿದ್ದಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರು, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಮೌಲಾನಾ ಆಜಾದ್‌ ಇವರೆಲ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ವರ್ಷಗಟ್ಟಲೆ ಜೈಲುವಾಸ ಅನುಭವಿಸಿದರು. ಇವರಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿಬಂದ ಒಬ್ಬನೇ ಒಬ್ಬ ಆರ್‌ಎಸ್‌ಎಸ್‌ ಮುಖಂಡನನ್ನು ತೋರಿಸಿ. ಆಮೇಲೆ ಬಿಜೆಪಿಯವರ ದೇಶಪ್ರೇಮವನ್ನು ಒಪ್ಪೋಣ ಎಂದು ಅವರು ಸವಾಲು ಹಾಕಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ ಪಕ್ಷದವರಿಗೆ ಭ್ರಷ್ಟಾಚಾರದ ಮಾಡಿ ಜೈಲು ಸೇರಿದ ಪಕ್ಷದವರು ದೇಶಪ್ರೇಮದ ಪ್ರಮಾಣಪತ್ರ ನೀಡುತ್ತಿದ್ದಾರೆ. ಎಂತಹಾ ವಿಪರ್ಯಾಸವಲ್ಲವೇ? ದೇಶಪ್ರೇಮಿ ಗಾಂಧಿಯನ್ನು ಕೊಂದ ಆರ್‌ಎಸ್‌ಎಸ್‌ನ ಗೋಡ್ಸೆಯ ಅನುಯಾಯಿಗಳು ನೀಡುವ ದೇಶಪ್ರೇಮದ ಸರ್ಟಿಫಿಕೆಟ್‌ ಯಾರಿಗೆ ಬೇಕಾಗಿದೆ? ಮಹಾತ್ಮಗಾಂಧಿ, ರಾಜೀವ್‌ಗಾಂಧಿ, ಇಂದಿರಾ ಗಾಂಧಿ ಅವರು ದೇಶಕ್ಕಾಗಿ ಪ್ರಾಣಾರ್ಪಣೆಗೈದರು. ದೇಶಕ್ಕಾಗಿ ಪ್ರಣತ್ಯಾಗ ಮಾಡಿದ ಒಬ್ಬನೇ ಒಬ್ಬ ಬಿಜೆಪಿಯವನನ್ನು ತೋರಿಸಿ. ಉಳಿದವರ ದೇಶಪ್ರೇಮ ಪ್ರಶ್ನಿಸುವ ಬಿಜೆಪಿಯವರೇ ನಿಜವಾದ ದೇಶಪ್ರೇಮಿಗಳಲ್ಲ. ಜಾತಿ, ಧರ್ಮಗಳ ಆಧಾರದ ಮೇಲೆ ದೇಶವನ್ನು ಒಡೆಯುತ್ತಿರುವ ನರೇಂದ್ರ ಮೋದಿಯೇ ನಿಜವಾದ ದೇಶದ್ರೋಹಿ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.