ಬೆಳಗಾವಿ [ಜು.26]: ರಾಜ್ಯದಲ್ಲಿ ಮೈತ್ರಿ ಪಾಳಯ ಅಧಿಕಾರ ಕಳೆದುಕೊಂಡು , ಬಿಜೆಪಿ ಸರ್ಕಾರ ರಚನೆಗೆ  ಸಿದ್ಧವಾಗಿದೆ.  ಸರ್ಕಾರ ರಚನೆ ಉತ್ಸಾಹದಲ್ಲಿರುವ ನಾಯಕರ ವಿರುದ್ಧ ಕೈ ಪಾಳಯ ಅಸಮಾಧಾನ ಹೊರಹಾಕಿದೆ. 

ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಬಿಜೆಪಿ ಸರ್ಕಾರ ರಚನೆ ಮಾಡಲು ಹೊರಟಿದೆ. ಆದರೆ ಇದಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಸರ್ಕಾರದ ಬಳಿ ಇಲ್ಲ. 111 ಸೀಟುಗಳ ಅವಶ್ಯಕತೆ ಇದ್ದು, ಸಂಖ್ಯಾಬಲ ಇಲ್ಲದ್ದರಿಂದ ಡ್ರಾಮಾ ನಡೆಯುತ್ತಿದೆ. ಅಲ್ಲದೇ ಯಡಿಯೂರಪ್ಪ ಪ್ರಮಾಣವಚನಕ್ಕೆ ಮುಂದಾಗಿದ್ದು,  ಯಾವ ಆಧಾರದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎನ್ನುವುದನ್ನು ನೊಡುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.  

ಅತೃಪ್ತ ಶಾಸಕರ ಅನರ್ಹ ವಿಚಾರ : ಈಗಾಗಲೇ ಅತೃಪ್ತರನ್ನು ಅನರ್ಹ ಮಾಡಲಾಗಿದೆ. ಗೋಕಾಕ್ ಶಾಸಕರಾಗಿದ್ದ ರಮೇಶ್ ಜಾರಕಿಹೊಳಿ, ರಾಣೆಬೆನ್ನೂರಿನ ಕೆಪಿಜೆಪಿ ಪಕ್ಷದ ಶಂಕರ್, ಮಹೇಶ್  ಅಥಣಿ ಕ್ಷೇತ್ರದ ಮಹೇಶ್ ಕುಮಟಳ್ಳಿ ಅವರನ್ನು ಅನರ್ಹ ಮಾಡಲಾಗಿದೆ. ಉಳಿದವರನ್ನು ಶೀಘ್ರ ಅನರ್ಹ ಮಾಡಲಿದ್ದು, ಒಂದು ವೇಳೆ ವಿಶ್ವಾಸ ಮತಕ್ಕೂ ಮುಂಚೆಯೇ ಅನರ್ಹ ಮಾಡಿದ್ದಲ್ಲಿ ಸರ್ಕಾರ ಉಳಿಯುತ್ತಿತ್ತು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಸರ್ಕಾರ ರಚನೆಯ ಅವಕಾಶ?

ಒಂದು ವೇಳೆ ಅತೃಪ್ತರನ್ನು ವಾಪಸ್ ಸೇರಿಸಿಕೊಳ್ಳುವ ಸಾಧ್ಯತೆಗಳಿದ್ದರೆ ಅದು ಹೈ ಕಮಾಂಡ್ ಗೆ ಮಾತ್ರವೇ ಬಿಟ್ಟ ವಿಚಾರವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು. 

ಇನ್ನು ಈ ಹಿಂದೆಯೆ ಆಪರೇಷನ್ ಕಮಲದ ಸುಳಿವು ದೊರಕಿದ್ದು, ಈ ಬಗ್ಗೆ ನಾನು ಹಿರಿಯ ನಾಯಕರಿಗೆ ಎಚ್ಚರಿಕೆ ನೀಡಿದ್ದೆ. ಆದರೆ ಇದನ್ನು ಯಾರೂ ಕೂಡ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಜಾರಕಿಹೊಳಿ ಅಸಮಾಧಾನ ಹೊರಹಾಕಿದರು.