ಇಂದೋರ್‌[ನ.24]: ಮೋದಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಪ್ರಧಾನಮಂತ್ರಿಗಳ ತಾಯಿಯ ಬಗ್ಗೆ ಕೀಳು ಹೇಳಿಕೆ ನೀಡಿ ಕಾಂಗ್ರೆಸ್‌ ಮುಖಂಡ ರಾಜ್‌ ಬಬ್ಬರ್‌ ವಿವಾದ ಸೃಷ್ಟಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ವಯಸ್ಸಿನ ರೀತಿಯಲ್ಲೇ ರುಪಾಯಿ ಮೌಲ್ಯವು ಡಾಲರ್‌ ಎದುರು ಕುಸಿಯುತ್ತಿದೆ’ ಎಂದು ಬಬ್ಬರ್‌ ಅವರು ಕಾಂಗ್ರೆಸ್‌ ಚುನಾವಣಾ ರಾರ‍ಯಲಿಯಲ್ಲಿ ಕುಹಕವಾಡಿದರು. ‘ರುಪಾಯಿ ಮೌಲ್ಯ ಮನಮೋಹನ ಸಿಂಗ್‌ ಅವರ ವಯಸ್ಸಿಗೆ ಸಮನಾಗಿದೆ ಎಂದು ಸಿಂಗ್‌ ಪ್ರಧಾನಿಯಾಗಿದ್ದಾಗ ಮೋದಿ ಟೀಕಿಸುತ್ತಿದ್ದರು. ಆದರೆ ಇಂದು ನೋಡಿ. ನಿಮ್ಮ (ಮೋದಿ) ಆದರಣೀಯ ತಾಯಿಯವರ ವಯಸ್ಸಿನ ರೀತಿ ರುಪಾಯಿ ಮೌಲ್ಯ ಕುಸಿಯುತ್ತಿದೆ’ ಎಂದು ಅವರು ಛೇಡಿಸಿದರು.

ಈ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ‘ಅನಗತ್ಯವಾಗಿ ವ್ಯಕ್ತಿಯೊಬ್ಬರ ತಾಯಿಯ ಬಗ್ಗೆ ಕೆಟ್ಟಮಾತು ಆಡಿದ್ದಕ್ಕೆ ಬಬ್ಬರ್‌ ಪರವಾಗಿ ಖುದ್ದು ರಾಹುಲ್‌ ಗಾಂಧಿ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.