ಗೋಕಾಕ್‌ನಲ್ಲಿ ನಾನೇ ಕೈ ಅಭ್ಯರ್ಥಿ: ಲಖನ್| ತ್ರೀ ಈಡಿಯೆಟ್ಸ್ ಮಾತು ಕೇಳಿ ಕೆಟ್ಟ ರಮೇಶ್: ಆರೋಪ
ಗೋಕಾಕ[ಸೆ.23]: ಮಾಜಿ ಸಚಿವ ಸತೀಶ್ ಜಾರಕಿಹೊಳಿ ಬಳಿಕ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಅವರ ಮತ್ತೊಬ್ಬ ಸಹೋದರ, ಗೋಕಾಕ್‌ನ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿರುವ ಅವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದು ಎದುರಾಳಿ ಯಾರಾದರೂ ತಲೆ ಕೆಡಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇವೇಳೆ ರಮೇಶ್ ಜಾರಕಿಹೊಳಿ ಮತ್ತವರ ಅಳಿಯಂದಿರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬಿಡಬೇಡಿ ಎಂದು ರಮೇಶ ಜಾರಕಿಹೊಳಿ ಅವರಿಗೆ ಹೇಳಿದ್ದೆ. ಆದರೆ ಅಳಿಯ ಅಂಬಿರಾವ್ ಪಾಟೀಲ ಮಾತು ಕೇಳಿ ಪಕ್ಷ ಬಿಟ್ಟಿದ್ದಾರೆ. ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ, ಬೆಳಗಾವಿ ಉಸ್ತುವಾರಿ ಸ್ಥಾನ ಕೊಟ್ಟಿತ್ತು. ತ್ರೀ ಇಡಿಯಟ್ಸ್ ಮಾತು ಕೇಳಿ ಕೆಟ್ಟಿದ್ದಾರೆ. ಅಂಬಿರಾವ್, ಅಪ್ಪಿ, ಶಂಕರ್‌ಗೆ ಜನ ಪಾಠ ಕಲಿಸಲಿದ್ದಾರೆ. ಬ್ಲ್ಯಾಕ್ ಮೆಲ್ ರಾಜಕೀಯ ಜಾಸ್ತಿ ದಿನ ನಡೆಯಲ್ಲ ಎಂದು ಗುಡುಗಿದರು.
25 ವರ್ಷಗಳಿಂದ ನಾವು ನಮ್ಮ ತಂದೆಯವರು ಕಾಂಗ್ರೆಸ್‌ನಲ್ಲಿಯೇ ಇದ್ದೇವೆ. ನಾವು ಹಿಂದೆ ನಿಂತು ಬೆಂಬಲ ನೀಡುತ್ತಿದ್ದೆವು. ಆದರೆ, ಈಗ ಕಾಲ ಕೂಡಿ ಬಂದಿದೆ. ನಾವು ಸಹ ಈಗ ಮುನ್ನೆಲೆಗೆ ಬಂದು ನಿಂತಿದ್ದೇವೆ. ರಮೇಶ್ ಜಾರಕಿಹೊಳಿ ಅಳಿಯಂದಿರಿಂದ ಗೋಕಾಕ್‌ನಲ್ಲಿ ಭ್ರಷ್ಟಾಚಾರ ನಡೆದಿದ್ದು, ಅವರ ಆಳ್ವಿಕೆಯನ್ನು ನಾವು ಗೋಕಾಕ್‌ನಲ್ಲೇ ಅಂತ್ಯಗೊಳಿಸುತ್ತೇವೆ ಎಂದು ಸವಾಲು ಹಾಕಿದರು.
