ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಜಾರಕಿಹೊಳಿ ನಡೆ ಈಗ ನಿಗೂಢವಾಗಿದೆ. ರಮೇಶ್ ಜಾರಕಿಹೊಳಿ ಹೊಸ ಪ್ಲಾನ್ ಮಾಡುತ್ತಿದ್ದು, ಶೀಘ್ರವೇ ಈ ಬಗ್ಗೆ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.
ಬೆಂಗಳೂರು : ಮತ್ತೊಬ್ಬ ಅತೃಪ್ತ ರಮೇಶ್ ಜಾರಕಿಹೊಳಿ ಅವರ ನಡೆ ನಿಗೂಢವಾಗಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲೇ ಇದ್ದ ರಮೇಶ್ ಜಾರಕಿಹೊಳಿ ಅವರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಗರಕ್ಕೆ ಆಗಮಿಸಿದ ಬೆನ್ನಲ್ಲೇ ಗೋಕಾಕ್ಗೆ ತೆರಳಿದರು.
ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಸೇರಿದಂತೆ ಯಾವುದೇ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿಲ್ಲ. ಕೆಲ ಕಾಂಗ್ರೆಸ್ ಶಾಸಕರೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದರೂ, ಅವರ ನಡೆ ನಿಗೂಢವಾಗಿದೆ.
ಕೆಲ ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿ ಅವರ ತಂಡವು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದು, ಈ ಪ್ರಯತ್ನ ಶೀಘ್ರವೇ ಫಲ ಕೊಡಲಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಬಹಿರಂಗ ಘೋಷಣೆಯೂ ಈ ತಂಡದಿಂದ ಹೊರಬೀಳಲಿದೆ ಎನ್ನಲಾಗುತ್ತಿದೆ.
ಆದರೆ, ಇದನ್ನು ಕಾಂಗ್ರೆಸ್ ಮೂಲಗಳು ಅಲ್ಲಗಳೆದಿದ್ದು, ರಮೇಶ್ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಳ್ಳಲು ಯಾವುದೇ ಕಾಂಗ್ರೆಸ್ ಶಾಸಕರು ತಯಾರಿಲ್ಲ. ಶೀಘ್ರವೇ ರಮೇಶ್ ಜಾರಕಿಹೊಳಿ ಅವರನ್ನು ಸಮಾಧಾನಪಡಿಸುವ ಕಾರ್ಯವನ್ನು ರಾಜ್ಯ ನಾಯಕರು ನಡೆಸಲಿದ್ದಾರೆ ಎನ್ನುತ್ತವೆ.
