ಬೆಂಗಳೂರು, [ಆ.26]: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಪರೋಕ್ಷವಾಗಿ ಹಾಲಿ ಕೆಪಿಸಿಸಿ ಅಧ್ಯಕ್ಷರು ಟಾಂಗ್ ಕೊಟ್ಟಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹಾಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನ್ಯೂಸ್ ನಲ್ಲಿ ಬಂದ ತಕ್ಷಣ ಎಲ್ಲವೂ ನಿಜ ಅನ್ನೋಕಾಗಲ್ಲ. ಪತ್ರಿಕೆಗಳಲ್ಲಿ ಪ್ರಚಾರ ತೆಗೆದುಕೊಂಡು ಕೆಪಿಸಿಸಿ ಅಧ್ಯಕ್ಷ ಆಗೋದಕ್ಕಾಗಲ್ಲ. ಎಐಸಿಸಿ ನಾಯಕರು ತೀರ್ಮಾನ ತೆಗೆದುಕೊಳ್ತಾರೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.

ದಿಲ್ಲಿಯಲ್ಲಿ ಡಿಕೆಶಿ : ಟ್ರಬಲ್ ಶೂಟರ್ ಗೆ ಸಿಗುತ್ತಾ KPCC ಚುಕ್ಕಾಣಿ?

ಕೇವಲ ಒಬ್ಬರಿಂದ ಪಕ್ಷ ಸಂಘಟನೆ ಮಾಡ್ತೀವಿ ಅನ್ನೋಕಾಗಲ್ಲ. ಬಿಜೆಪಿಯಲ್ಲಿ ಇರುವ ಗೊಂದಲಗಳನ್ನು ಡೈವರ್ಟ್ ಮಾಡೋದಕ್ಕೆ ನಮ್ಮ ಕಾಂಗ್ರೆಸ್ ನಲ್ಲಿ ಗೊಂದಲಗಳನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿರಬಹುದು. ನಮ್ಮ ನಾಯಕರು ಎಲ್ಲರೂ ಕೂಡ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಕೇವಲ ಒಬ್ಬಿಬ್ಬರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನಾನು ಯಾವುದೇ ಲಾಬಿ ನಡೆಸಿಲ್ಲ. ಯಾರಿಗೆ ಆತುರ ಇದೆಯೋ, ಯಾರಿಗೆ ಕಾರು ಹಾಗೂ ಮನೆ ಬೇಕಿದೆಯೋ ಅವರು ಆಗಲಿ. ನನಗೆ ಸ್ವಂತ ಮನೆ ಇದೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕ್ಕೆ ನೀಡಿರುವದನ್ನು ಇಲ್ಲಿ ಸ್ಮರಿಸಬಹುದು.

ಬಿಜೆಪಿಯಲ್ಲಿ ಮಂತ್ರಿ ಸ್ಥಾನಕ್ಕೆ ಗುದ್ದಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟುವ ಸಾಧ್ಯತೆಗಳಿವೆ. ಇದಕ್ಕೆ ಪೂರಕವೆಂಬಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ  ಡಿಕೆಶಿ ಚರ್ಚೆ ನಡೆಸಿದ್ದರು.