ಭೋಪಾಲ್(ಮಾ.05): ತಮ್ಮ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿದ್ದಕ್ಕೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಭಿನಂದಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದೀಗ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಅಪಘಾತ ಎಂದು ಹೇಳಿರುವ ದಿಗ್ವಿಜಯ್ ಸಿಂಗ್ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪುಲ್ವಾಮಾ ದುರ್ಘಟನೆಯನ್ನು ಕೇಂದ್ರ ಸರ್ಕಾರ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು, ಈ ಕುರಿತು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ದಿಗ್ವಿಜಯ್ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವಿಟ್ ಮಾಡಿರುವ ದಿಗ್ವಿಜಯ್, ಪ್ರತಿ ಟ್ವೀಟ್ ನಲ್ಲೂ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು 'ಅಪಘಾತ' ಎಂದು ಉಲ್ಲೇಖಿಸಿದ್ದಾರೆ. ದಿಗ್ವಿಜಯ್ ಅವರ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿರುವ ನೆಟಿಜನ್ಸ್, ಭಯೋತ್ಪಾದಕ ದಾಳಿ ಕಾಂಗ್ರೆಸ್‌ಗೆ ಕೇವಲ ಅಪಘಾತವಾಗಿ ಕಾಣುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಇನ್ನು ದಿಗ್ವಿಜಯ್ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ, ಮಾಜಿ ಸೇನಾಧ್ಯಕ್ಷ ಜನರಲ್ ವಿ.ಕೆ. ಸಿಂಗ್, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರದ್ದೋ ಹತ್ಯೆಯೋ ಅಥವಾ ಅಪಘಾತವೋ ಎಂದು ಪ್ರಶ್ನಿಸಿದ್ದಾರೆ.