ಅಧಿಕಾರಿಗಳ ದಾಳಿಗೆ ಬೆಚ್ಚಿಬಿದ್ದ ಕಾಂಗ್ರೆಸ್‌ ಅಭ್ಯರ್ಥಿಯೋರ್ವರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. 

ಹೈದರಾಬಾದ್‌: ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಹಣ ಶೇಖರಣೆ ಮಾಡಿದ್ದಾರೆ ಎಂಬ ಆಪಾದನೆ ಮೇರೆಗೆ ಚುನಾವಣಾಧಿಕಾರಿಗಳು ಕಾಂಗ್ರೆಸ್‌ ಅಭ್ಯರ್ಥಿ ವಂಟೇರು ಪ್ರತಾಪ್‌ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳ ದಾಳಿಗೆ ಬೆಚ್ಚಿಬಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪ್‌ ರೆಡ್ಡಿ, ಅವರು ಆತ್ಮಹತ್ಯೆಗೆ ಶರಣಾಗಲು ಮುಂದಾದ ನಾಟಕೀಯ ಬೆಳವಣಿಗೆ ನಡೆದಿದೆ.

ಗಾಜ್ವೆಲ್‌ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಿಂದ ಕಣಕ್ಕಿಳಿದಿರುವ ಪ್ರತಾಪ್‌ ರೆಡ್ಡಿ ಅವರ ನಿವಾಸದಲ್ಲಿ ಮತದಾರರಿಗೆ ಹಂಚಲು ಹಣ ಶೇಖರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು, ಸೋಮವಾರ ರಾತ್ರಿ ರೆಡ್ಡಿ ನಿವಾಸಕ್ಕೆ ದಾಂಗುಡಿ ಇಟ್ಟರು. ಆದರೆ, ಈ ವೇಳೆ ತನಿಖಾಧಿಕಾರಿಗಳ ತಪಾಸಣೆಗೆ ರೆಡ್ಡಿ ಮತ್ತು ಆತನ ಬೆಂಬಲಿಗರು ಅಡ್ಡಿಪಡಿಸಿದರು. 

ಅಲ್ಲದೆ, ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪ್‌ ರೆಡ್ಡಿ ಅವರು ತಮ್ಮ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾದರು. ಆದರೆ, ಇದನ್ನು ಪೊಲೀಸರು ತಡೆದರು. ಜೊತೆಗೆ, ರೆಡ್ಡಿ ಮತ್ತು ಆತನ ಬೆಂಬಲಿಗರ ವಿರುದ್ಧ ಆತ್ಮಹತ್ಯೆಗೆ ಯತ್ನ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೇಸ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.