ಬೆಂಗಳೂರು[ಜು. 12] ವಿಧಾನಸಭೆ ಮಳೆಗಾಲದ ಅಧಿವೇಶನ ಇಂದಿನಿಂದ ಅಂದರೆ ಶುಕ್ರವಾರದಿಂದ ಆರಂಭವಾಗಿದೆ. ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಮೂರು ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ.

ಸರಕಾರದ ಮುಖ್ಯ ಸಚೇತಕ ಆಡಳಿತ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದರೆ ಅತ್ತ ಬಿಜೆಪಿ ತನ್ನ ಶಾಸಕರನ್ನು ಕಾಯ್ದುಕೊಳ್ಳುವ ತಂತ್ರದ ಭಾಗವಾಗಿ ವಿಪ್ ನೀಡಿದೆ. ರಾಜೀನಾಮೆ ನೀಡಿದ್ದ ಶಾಸಕರು ಮುಂಬೈನಲ್ಲಿ ಇರುವುದರಿಂದ ಜಾರಿಯಾದ ವಿಪ್ ಅನ್ನು ವಿಧಾನಸೌಧದ ಅವರ ಕೊಠಡಿಗೆ ಅಂಟಿಸಲಾಗಿದೆ. ಕಾಂಗ್ರೆಸ್ ಶಾಸಕರು ಯಶವಂತಪುರ ಬಳಿಯ ಪಂಚತಾರಾ ಹೋಟೆಲ್ ಸೇರಿಕೊಂಡಿದ್ದರೆ, ಜೆಡಿಎಸ್ ಶಾಸಕರು ನಂದಿ ಬೆಟ್ಟದ ತಪ್ಪಲಿನ ರೆಸಾರ್ಟ್  ವಾಸ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರು ಯಲಹಂಕದ ಖಾಸಗಿ ರೆಸಾರ್ಟ್ ನಲ್ಲಿ ಇದ್ದಾರೆ.

ವಿಪ್ ಎಂದರೆ ಏನು?

ವಿಪ್ ಜಾರಿಯಾಗಿದೆ, ವಿಪ್ ಜಾರಿಯಾಗಿದೆ...ಎಂದು ಪದೇ ಪದೇ ಕೇಳುತ್ತಿರುತ್ತೇವೆ. ಹಾಗಾದರೆ ವಿಪ್ ಎಂದರೆ ಏನು ತಿಳಿದುಕೊಳ್ಳಬೇಕಲ್ವ. ವಿಪ್ ಎಂದರೆ ಒಂದರ್ಥದಲ್ಲಿ ಶಾಸಕರಿಗೆ ಮೂಗುದಾರ  ಎಂದುಕೊಳ್ಳಬಹುದು.

ಕರ್ನಾಟಕ ದೋಸ್ತಿ ಸರ್ಕಾರಕ್ಕೆ ‘ಗ್ರಹಣ’  ಜ್ಯೋತಿಷಿ SK ಜೈನ್ ಕೊಟ್ಟ ಕಾರಣ

ವಿಪ್ ಎಂಬುದು ಪಕ್ಷಗಳು ತಮ್ಮ ಜನಪ್ರತಿನಿಧಿಗಳಿಗೆ ನೀಡುವ ಸೂಚನೆ, ಕಟ್ಟುನಿಟ್ಟಿನ ಆದೇಶ, ನಿರ್ದೇಶನ ಎಂದು ಪರಿಭಾವಿಸಬಹುದು. ಇದು ಲಿಖಿತವಾಗಿರುತ್ತದೆ ಎನ್ನುವುದು ಅಷ್ಟೇ ಮುಖ್ಯವಾದ ವಿಚಾರ. ರಾಜ್ಯಸಭಾ ಚುನಾವಣೆ, ಪರಿಷತ್ ಚುನಾವಣೆ, ಅವಿಶ್ವಾಸ ನಿರ್ಣಯದಂಥ ಸಂದರ್ಭದಲ್ಲಿ ಶಾಸಕರು ಹಾಜರಾಗದೆ ಕೈಕೊಡುತ್ತಾರೆ ಎಂಬ ಸಂಶಯ ಉಂಟಾದಾಗ ಪಕ್ಷಗಳು ಇದರ ಪ್ರಯೋಗ ಮಾಡುವುದು ಸಾಮಾನ್ಯ

ವಿಪ್​ನಲ್ಲಿ ಸಿಂಗಲ್ ಲೈನ್, ಡಬಲ್ ಲೈನ್ ಮತ್ತು ಥ್ರೀ ಲೈನ್ ವಿಪ್​ಗಳೆಂಬ ಮೂರು ವಿಧಗಳಿವೆ. ಸಿಂಗಲ್ ಲೈನ್ ವಿಪ್​ನಲ್ಲಿ ಮತದಾನದ ದಿನಾಂಕ ಮೊದಲಾದ ವಿವರವನ್ನು ನೋಟಿಸ್ ಮೂಲಕ ನೀಡಲಾಗುತ್ತದೆ ಅಂದರೆ ಇಲ್ಲಿ ಕಡ್ಡಾಯ ಎಂಬುದಿರುವುದಿಲ್ಲ. ಬಂದರೆ ಬಾ..ಇಲ್ಲವಾದರೆ ಇಲ್ಲ!

ಡಬಲ್ ಲೈನ್ ವಿಪ್​ನಲ್ಲಿ ಮತದಾನ ಮಾಡಲು ಪಕ್ಷವು ಸ್ವಲ್ಪಮಟ್ಟಿಗೆ ಕಡ್ಡಾಯ ಮಾಡಿರುತ್ತದೆ. ಸರಿಯಾದ ಕಾರಣ ಕೊಟ್ಟು ಮತದಾನದಿಂದ ದೂರ ಉಳಿಯುವ ಸ್ವಾತಂತ್ರ್ಯ ಕೊಟ್ಟಿರಲಾಗುತ್ತದೆ. ಅಂದರೆ ಅಲ್ಲಿಗೆ ಒಂದು ಚಾಯ್ಸ್ ಇದ್ದಂಗೆ...

ಆದರೆ ಥ್ರಿಲೈನ್ ವಿಪ್​ನಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿರಲಾಗುತ್ತದೆ. ಥ್ರಿಲೈನ್ ವಿಪ್ ಪಡೆದವರು ಮತದಾನ ಮಾಡಲಿಲ್ಲವೆಂದರೆ ಪಕ್ಷದಿಂದಲೇ ಅಮಾನತಾಗುವ ಸಾಧ್ಯತೆ ಇರುತ್ತದೆ. ಇದೇ ವಿಪ್ ಬಳಕೆಯನ್ನು ರಾಜಕೀಯ ಪಕ್ಷಗಳು ಮಾಡುತ್ತವೆ.