ಬೆಂಗಳೂರು :  ಸಚಿವ ಸಂಪುಟ ವಿಸ್ತರಣೆಗಾಗಿ ತೀವ್ರ ಲಾಬಿ ನಡೆಸುತ್ತಿರುವ ಆಕಾಂಕ್ಷಿಗಳು ಹಾಗೂ ಅಧಿಕಾರ ಹಿಡಿದಿರುವ ಸಚಿವರ ಕ್ಷೇತ್ರಗಳಲ್ಲೂ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಮಹತ್ವಾಕಾಂಕ್ಷಿ ‘ಶಕ್ತಿ’ ಸದಸ್ಯತ್ವ ನೋಂದಣಿ ಯೋಜನೆ ವಿಫಲವಾಗಿರುವುದಕ್ಕೆ ಕಾಂಗ್ರೆಸ್‌ ಹೈ ಕಮಾಂಡ್‌ ಕೆಂಡಾಮಂಡಲವಾಗಿದ್ದು, ಸಚಿವ ಸ್ಥಾನ ಬೇಕೆಂದರೆ ಪಕ್ಷ ಸಂಘಟನೆಯ ಕೆಲಸ ಮಾಡಿ ತೋರಿಸಿ ಎಂದು ಶಾಸಕರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ.

ಅಧಿಕಾರ ಪಡೆದಿರುವ ಸಚಿವರು ಪಕ್ಷಕ್ಕೆ ನೀಡುವ ಕೊಡುಗೆ ಏನು? ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವವರಿಂದ ಪಕ್ಷ ಏನು ನಿರೀಕ್ಷಿಸಬೇಕು? ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಲ್ಲ, ಮೊದಲು ಪಕ್ಷ ಸಂಘಟನೆ ಮಾಡಿ. ಯಾರು ಹೆಚ್ಚು ಸದಸ್ಯತ್ವ ನೋಂದಣಿ ಮಾಡುತ್ತಾರೋ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿರುವ ಹೈಕಮಾಂಡ್‌, ಇನ್ನೂ 15 ದಿನ ಸದಸ್ಯತ್ವ ನೋಂದಣಿಗೆ ಅವಧಿ ವಿಸ್ತರಿಸಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ದೇಶಾದ್ಯಂತ ಕಾಂಗ್ರೆಸ್‌ ಪಕ್ಷವನ್ನು ಬಲಗೊಳಿಸಲು ಪರಿಚಯಿಸಲಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮಹತ್ವಾಕಾಂಕ್ಷಿ ‘ಶಕ್ತಿ ಯೋಜನೆ’ ಕಾಂಗ್ರೆಸ್‌ ಅಧಿಕಾರದಲ್ಲಿರುವ ಕರ್ನಾಟಕದಲ್ಲೇ ವಿಫಲವಾಗಿದೆ. ಹಾಲಿ ಸಚಿವರು, ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಕ್ಷೇತ್ರಗಳಲ್ಲೂ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಸದಸ್ಯತ್ವ ನೋಂದಣಿ ಫಲಿತಾಂಶ ಬಹಳ ನೀರಸವಾಗಿದೆ. ಇದರಿಂದ ಹೈಕಮಾಂಡ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

60 ಸಾವಿರ ನೋಂದಣಿ ಗುರಿ ಎಲ್ಲೂ ಆಗಿಲ್ಲ:  ಶಕ್ತಿ ಯೋಜನೆಯಡಿ ವಾಟ್ಸ್‌ಆ್ಯಪ್‌ ಮೂಲಕ ಪ್ರತಿ ವಿಧಾಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಲಾ 60 ಸಾವಿರ ಹೊಸ ಸದಸ್ಯರ ನೋಂದಣಿಗೆ ಗುರಿ ನೀಡಲಾಗಿತ್ತು. ಪಕ್ಷದ ಪದಾಧಿಕಾರಿಗಳು, ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಈ ಹೊಣೆ ನೀಡಲಾಗಿತ್ತು. ಆದರೆ, ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನೀಡಿದ್ದ ನಾಲ್ಕು ತಿಂಗಳ ಕಾಲಾವಕಾಶ ಮುಗಿದರೂ ಯಾವೊಂದು ಕ್ಷೇತ್ರದಲ್ಲೂ ನಿರೀಕ್ಷಿತ ಗುರಿಯ ನೋಂದಣಿ ನಡೆದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಯೋಜನೆ ವಿಫಲವಾಗಿದೆ.

ಒಟ್ಟಾರೆ ಸದಸ್ಯತ್ವ ನೋಂದಣಿಯಲ್ಲೂ, ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ನಲ್ಲಿ 7 ಲಕ್ಷ ಹೊಸ ಸದಸ್ಯರ ನೋಂದಣಿ ಮಾಡಿದ್ದರೆ, ಮಧ್ಯಪ್ರದೇಶದಲ್ಲಿ 6.5 ಲಕ್ಷ, ಚಿಕ್ಕರಾಜ್ಯ ಛತ್ತಿಸ್‌ಗಢದಲ್ಲಿ 6 ಲಕ್ಷ ಸದಸ್ಯರ ನೋಂದಣಿ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆ ಇದ್ದರೂ ಕೆಪಿಸಿಸಿಯಿಂದ ಕೇವಲ 2.80 ಲಕ್ಷ ಸದಸ್ಯರ ನೋಂದಣಿ ಮಾಡಲಾಗಿದೆ.

ಯಶವಂತಪುರದಲ್ಲಿ ಅತಿ ಹೆಚ್ಚು:  ಶಾಸಕ ಎಸ್‌.ಟಿ.ಸೋಮಶೇಖರ್‌ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರದಲ್ಲಿ 56,251 ಸದಸ್ಯರ ನೋಂದಣಿಯಾಗಿದೆ. ಇದು ಅತಿ ಹೆಚ್ಚು ಸದಸ್ಯರ ನೋಂದಣಿಯಾಗಿರುವ ಕ್ಷೇತ್ರವಾಗಿದೆ. ಇನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಶಾಸಕರಾಗಿರುವ ಗಾಂಧಿನಗರ ಕ್ಷೇತ್ರದಲ್ಲಿ ಕೇವಲ 9,436, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪ್ರತಿನಿಧಿಸುವ ಪಾವಗಡ ಕ್ಷೇತ್ರದಲ್ಲಿ 1947, ಸಚಿವ ಡಿ.ಕೆ.ಶಿವಕುಮಾರ್‌ ಅವರ ಕ್ಷೇತ್ರ ಕನಕಪುರ ಕ್ಷೇತ್ರದಲ್ಲಿ 6820, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ 1309 ಸದಸ್ಯತ್ವ ನೋಂದಣಿ ಮಾಡಲಾಗಿದೆ. ಇನ್ನು, ಸಚಿವಸ್ಥಾನದ ಆಕಾಂಕ್ಷಿಗಳ ಕ್ಷೇತ್ರದಲ್ಲೂ ಸದಸ್ಯತ್ವ ನೋಂದಣಿ ಮೂರಂಕಿ ದಾಟಿಲ್ಲ.

ಏನಿದು ಶಕ್ತಿ ಯೋಜನೆ?

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಇನ್ನಷ್ಟುಸದೃಢಗೊಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ‘ಶಕ್ತಿ’ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಳೆದ ಆಗಸ್ಟ್‌ನಿಂದ ಆರಂಭಿಸಿದ್ದ ಈ ಯೋಜನೆಗೆ ನ.30ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಇನ್ನೂ 15 ದಿನ ಕಾಲಾವಕಾಶ ವಿಸ್ತರಿಸಲಾಗಿದೆ. ದೇಶಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಕನಿಷ್ಠ 60 ಸಾವಿರ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿಯನ್ನು ಶಕ್ತಿ ಯೋಜನೆ ಅಡಿಯಲ್ಲಿ ಹೊಂದಲಾಗಿದ್ದು, ಅದರಂತೆ ಪಕ್ಷದ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವಂತೆ ಸೂಚಿಸಲಾಗಿದೆ. ಮತದಾರರು ತಮ್ಮ ಮತದಾರರ ಗುರುತಿನ ಚೀಟಿ (ಐಡಿ ಕಾರ್ಡ್‌)ನ ಎಪಿಕ್‌ ಸಂಖ್ಯೆಯನ್ನು ಮೊಬೈಲ್ ಸಂಖ್ಯೆ 70450-06100ಕ್ಕೆ ಎಸ್‌ಎಂಎಸ್‌ ಮೂಲಕ ಕಳುಹಿಸಿದರೆ, ಅತ್ತ ಕಡೆಯಿಂದ ಕೆಲವೇ ನಿಮಿಷಗಳಲ್ಲಿ ಸದಸ್ಯತ್ವ ನೋಂದಣಿಯಾಗಿರುವ ಕುರಿತು ಅಭಿನಂದನಾ ಸಂದೇಶ ಬರುತ್ತದೆ.


ಹಾಲಿ ಸಚಿವರು ಮತ್ತು ಆಕಾಂಕ್ಷಿಗಳ ಕ್ಷೇತ್ರದ ಸದಸ್ಯತ್ವ ನೋಂದಣಿ

ಶಾಸಕ/ಸಚಿವ    ಸದಸ್ಯತ್ವ ನೋಂದಣಿ

ಎಸ್‌.ಟಿ.ಸೋಮಶೇಖರ್‌ (ಯಶವಂತಪುರ)    56251

ದಿನೇಶ್‌ ಗುಂಡೂರಾವ್‌ (ಗಾಂಧಿನಗರ)    9436

ಈಶ್ವರ್‌ ಖಂಡ್ರೆ    (ಬಾಲ್ಕಿ)    8060

ಡಿ.ಕೆ.ಶಿವಕುಮಾರ್‌ (ಕನಕಪುರ)    6820

ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್‌)    2892

ಚನ್ನಬಸಪ್ಪ ಎಸ್‌.ಶಿವಳ್ಳಿ (ಕುಂದಗೋಳ) 2551

ಕೃಷ್ಣಬೈರೇಗೌಡ (ಬ್ಯಾಟರಾಯನಪುರ) 2490

ಡಾ.ಜಿ.ಪರಮೇಶ್ವರ್‌ (ಕೊರಟಗೆರೆ) 1947

ಆರ್‌.ವಿ.ದೇಶಪಾಂಡೆ (ಹಳಿಯಾಳ)    1690

ಶಿವಾನಂದ ಪಾಟೀಲ್‌ (ಬಸವನಬಾಗೇವಾಡಿ) 1596

ಬಿ.ಝಡ್‌. ಜಮೀರ್‌ ಅಹಮದ್‌ ಖಾನ್‌ (ಚಾಮರಾಜಪೇಟೆ) 1490

ಸಿದ್ದರಾಮಯ್ಯ(ಬಾದಾಮಿ)    1309

ಯು.ಟಿ.ಖಾದರ್‌ (ಮಂಗಳೂರು)    931

ಎನ್‌.ಎಚ್‌.ಶಿವಶಂಕರರೆಡ್ಡಿ (ಗೌರಿಬಿದನೂರು) 885

ಲಕ್ಷ್ಮಣ್‌ ಜಾರಕಿಹೊಳಿ (ಗೋಕಾಕ) 816

ತುಕಾರಾಮ್‌ (ಸಂಡೂರು) 538

ಬಿ.ಸಿ.ಪಾಟೀಲ್‌ (ಹಿರೇಕೆರೂರು) 382

ವೆಂಕಟರಮಣಪ್ಪ (ಪಾವಗಡ) 318

ಪ್ರಿಯಾಂಕ ಖರ್ಗೆ (ಚಿತ್ತಾಪುರ) 270

ಕೆ.ಸುಧಾಕರ್‌ (ಚಿಕ್ಕಬಳ್ಳಾಪುರ) 246

ರಾಜಶೇಖರ ಪಾಟೀಲ್‌ (ಹುಮನಾಬಾದ್‌) 227

ಎಂಟಿಬಿ ನಾಗರಾಜ್‌ (ಹೊಸಕೋಟೆ) 196

ಸಿ.ಪುಟ್ಟರಂಗಶೆಟ್ಟಿ(ಚಾಮರಾಜನಗರ) 150