ಕಲಬುರಗಿ: ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಫೇಸ್‌ಬುಕ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಬೇಕಾ? ಡಾ.ಉಮೇಶ್‌ ಜಾಧವ್‌ ಬೇಕಾ? ಎಂದು ಚುನಾವಣೆ ನಡೆಸಿ ಪೆಚಿಗೆ ಸಿಲುಕಿದ ಘಟನೆ ನಡೆದಿದೆ.

ಜಿಲ್ಲಾ ಕಾಂಗ್ರೆಸ್‌ ಈ ಮತದಾನವನ್ನು ಫೇಸ್‌ಬುಕ್‌ನಲ್ಲಿ ವ್ಯವಸ್ಥೆ ಮಾಡಿತ್ತು. ಇದರಲ್ಲಿ ಒಂದು ಕಡೆ ಕಲಬುರಗಿ ಹೆಮ್ಮೆ, ಖರ್ಗೆ ಬೇಕಾ? ಎಂದು. ಮತ್ತೊಂದು ಕಡೆ ಆಪರೇಷನ್‌ ಕಮಲಕ್ಕೆ ಬಲಿಯಾದ ಜಾಧವ್‌ ಬೇಕಾ? ಎಂದು ಖರ್ಗೆ ಹಾಗೂ ಡಾ.ಜಾಧವ್‌ ಇಬ್ಬರ ಫೋಟೋಗಳನ್ನು ಹಾಕಿ ಯಾರನ್ನು ಬೆಂಬಲಿಸುತ್ತೀರಿ ಎಂದು ಪ್ರಶ್ನಿಸಲಾಗಿತ್ತು.

ಈ ಮತದಾನದಲ್ಲಿ ಪಾಲ್ಗೊಂಡವರಲ್ಲಿ ಶೇ.90ಕ್ಕೂ ಅಧಿಕ ಜನ ಡಾ.ಜಾಧವ್‌ ಅವರನ್ನು ಬೆಂಬಲಿಸಿದರೆ, ಶೇ.10 ರಷ್ಟುಜನ ಮಾತ್ರ ಖರ್ಗೆಯವರನ್ನು ಬೆಂಬಲಿಸಿದ್ದಾರೆ. ಆದರೆ, ವಿಸ್ತೃತ ಮಾಹಿತಿಗೂ ಮುಂಚೆಯೇ ಜಿಲ್ಲಾ ಕಾಂಗ್ರೆಸ್‌ ಫೇಸ್‌ಬುಕ್‌ ಅಕೌಂಟ್‌ನಿಂದ ಈ ಮತದಾನದ ವಿವರಗಳನ್ನು ತೆಗೆದುಹಾಕಿದೆ.