ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಟ್ಟು 542 ಲೋಕಸಭಾ ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಕ್ಷ (ಬಿಜೆಪಿ)ವೊಂದೇ 303 ಸೀಟುಗಳನ್ನು ಪಡೆದುಕೊಂಡಿದೆ. ಕುತೂಹಲಕಾರಿಯಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತಿತರ ಪಕ್ಷಗಳು ಧೂಳೀಪಟವಾಗಿವೆ.

52 ಸ್ಥಾನ ಪಡೆದ ಕಾಂಗ್ರೆಸ್‌ಗೆ ಈ ಬಾರಿಯೂ ಅಧಿಕೃತ ವಿಪಕ್ಷ ಸ್ಥಾನ ಕೈತಪ್ಪಿದೆ. ಸರ್ಕಾರ ಮನಸ್ಸು ಮಾಡಿದರೆ ಅಧಿಕೃತ ವಿಪಕ್ಷದ ಸ್ಥಾನ ನೀಡಬಹುದಷ್ಟೆ. ಇಲ್ಲದಿದ್ದರೆ ಇಲ್ಲ. ಹಿಂದಿನ ಬಾರಿ ಮೋದಿ ಸರ್ಕಾರ 44 ಸೀಟು ಪಡೆದಿದ್ದ ಕಾಂಗ್ರೆಸ್ಸಿಗೆ ಅಧಿಕೃತ ವಿಪಕ್ಷ ಸ್ಥಾನ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭೆಯ ಅಧಿಕೃತ ವಿಪಕ್ಷ ಸ್ಥಾನದ ಆಯ್ಕೆ ಹೇಗೆ? ಪ್ರಜಾಪ್ರಭುತ್ವದಲ್ಲಿ ವಿಪಕ್ಷ ಸ್ಥಾನ ಎಷ್ಟುಮುಖ್ಯ? ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲಿ ಅಧಿಕೃತ ವಿಪಕ್ಷ ಸ್ಥಾನ ಯಾರಿಗೆ ಯಾವಾಗ ಸಿಕ್ಕಿತ್ತು? ವಿಸ್ತೃತ ಮಾಹಿತಿ ಇಲ್ಲಿದೆ.

ಅಧಿಕೃತ ವಿಪಕ್ಷ ಆಯ್ಕೆ ಹೇಗೆ?

ವಿರೋಧ ಪಕ್ಷದ ನಾಯಕನ ಸ್ಥಾನವು ಬ್ರಿಟಿಷ್‌ ಇಂಡಿಯಾ ಕಾಲದಲ್ಲೇ ಅಸ್ತಿತ್ವದಲ್ಲಿದ್ದರೂ ಮೋತಿಲಾಲ್‌ ನೆಹರು ಸೇರಿದಂತೆ ಇತರರ ನೇತೃತ್ವದಲ್ಲಿ ರೂಪುಗೊಂಡ ‘ವಿರೋಧ ಪಕ್ಷದ ನಾಯಕರ ಸಂಬಳ ಮತ್ತು ಭತ್ಯೆ ಕಾಯ್ದೆ -1977’ರ ಮೂಲಕ ಇವರಿಗೆ ಶಾಸನಬದ್ಧ ಸ್ಥಾನಮಾನ ಲಭಿಸಿತು. ಸಂಸತ್ತಿನ ನಿಯಮದ ಪ್ರಕಾರ ಅಧಿಕೃತ ವಿಪಕ್ಷ ಸ್ಥಾನ ಗಳಿಸಲು ಲೋಕಸಭೆಯ ಒಟ್ಟು ಸದಸ್ಯ ಬಲದಲ್ಲಿ ಕನಿಷ್ಠ 55 ಸದಸ್ಯರ (ಲೋಕಸಭೆಯ 543 ಸದಸ್ಯರ ಶೇ.10ರಷ್ಟು) ಅಗತ್ಯವಿದೆ.

2 ನೇ ಬಾರಿ ಕಾಂಗ್ರೆಸ್‌ಗೆ ಅಧಿಕೃತ ವಿಪಕ್ಷ ಸ್ಥಾನ ಇಲ್ಲ

2014ರಲ್ಲಿ ಕಾಂಗ್ರೆಸ್‌ ಒಟ್ಟು ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ 44 ಸೀಟುಗಳನ್ನು ಮಾತ್ರ ಗೆದ್ದಿದ್ದರಿಂದ ಲೋಕಸಭೆಯಲ್ಲಿ ಅಧಿಕೃತ ವಿರೋಧಪಕ್ಷ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿಯೂ ಕಾಂಗ್ರೆಸ್‌ 52 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿದೆ. ಆದ್ದರಿಂದ ಈ ಬಾರಿಯೂ ಅಧಿಕೃತ ವಿಪಕ್ಷ ಸ್ಥಾನವನ್ನು ಕಳೆದುಕೊಳ್ಳಲಿದೆ.

ಹಾಗಾಗಿ ದೇಶದ ಅತ್ಯಂತ ಹಳೆಯ, ಪ್ರಭಾವಿ ಪಕ್ಷವಾದ ಕಾಂಗ್ರೆಸ್‌ಗೆ ಎರಡನೇ ಬಾರಿ ವಿಪಕ್ಷ ಸ್ಥಾನವೂ ಕೈತಪ್ಪಿದಂತಾಗಿದೆ. ಆದರೆ, ಅಧಿಕೃತ ವಿಪಕ್ಷ ಸ್ಥಾನ ಪಡೆಯಲು ಬೇಕಿರುವಷ್ಟುಸಂಖ್ಯೆ ಪಡೆಯಲು ವಿಫಲವಾದ ರಾಜಕೀಯ ಪಕ್ಷಕ್ಕೂ ಲೋಕಸಭೆಯ ಸ್ಪೀಕರ್‌ (ಅಂದರೆ ಸರ್ಕಾರ) ಮನಸ್ಸು ಮಾಡಿದರೆ ಅಧಿಕೃತ ವಿಪಕ್ಷದ ಸ್ಥಾನ ನೀಡಬಹುದು. ಈ ಬಾರಿ ಕಾಂಗ್ರೆಸ್ಸಿಗೆ ಮೋದಿ ಈ ಸ್ಥಾನ ನೀಡುತ್ತಾರೆಯೇ?

ವಿರೋಧ ಪಕ್ಷದ ನಾಯಕ ಏಕೆ ಮುಖ್ಯ?

ಒಂದು ಆಡಳಿತ ಪಕ್ಷ ಇದ್ದ ಮೇಲೆ ಅದರ ಸರಿ ತಪ್ಪುಗಳನ್ನು ತಿದ್ದುವ ಕೆಲಸ ಮಾಡಲೆಂದೇ ಸಂವಿಧಾನಾತ್ಮಕವಾಗಿ ‘ವಿರೋಧ ಪಕ್ಷದ ನಾಯಕ’ ಎಂಬ ಸ್ಥಾನಮಾನ ಇದೆ. ಅದಲ್ಲದೆ ಪ್ರಮುಖ ಸಂವಿಧಾನಿಕ ಸಂಸ್ಥೆಗಳಾದ ಲೋಕಪಾಲ, ಕೇಂದ್ರೀಯ ತನಿಖಾ ದಳ (ಸಿಬಿಐ), ಸಿವಿಸಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರ ನೇಮಕಾತಿ ಆಯ್ಕೆ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕರ ಪಾತ್ರ ಮುಖ್ಯವಾಗಿರುತ್ತದೆ.

16 ನೇ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ಸಿನ ಲೋಕಸಭೆ ನಾಯಕರಾಗಿದ್ದರೇ ಹೊರತು ಅಧಿಕೃತ ವಿರೋಧ ಪಕ್ಷದ ನಾಯಕರಾಗಿರಲಿಲ್ಲ. ಹೀಗಾಗಿ ಕೊನೆಯವರೆಗೂ ಅವರು ಲೋಕಪಾಲ, ಸಿಬಿಐ, ಸಿವಿಸಿ ಮುಖ್ಯಸ್ಥರ ಆಯ್ಕೆ ಸಮಿತಿಯ ಸಭೆಯಲ್ಲಿ ಪದನಿಮಿತ್ತವಾಗಿ ಪಾಲ್ಗೊಳ್ಳಲು ಆಗಲಿಲ್ಲ.

ಕಾಯ್ದೆಯಲ್ಲೇ ಇಲ್ಲ ಶೇ.10ರ ನಿಯಮ!

1977ರ ವಿಪಕ್ಷ ನಾಯಕರ ಸಂಬಳ ಮತ್ತು ಭತ್ಯೆ ಕಾಯ್ದೆಯಡಿ ವಿಪಕ್ಷ ನಾಯಕ ಸ್ಥಾನಕ್ಕೆ ಶಾಸನಬದ್ಧ ಸ್ಥಾನಮಾನವಿದೆ. ಈ ಪ್ರಕಾರ ಆಡಳಿತ ಪಕ್ಷವನ್ನು ಬಿಟ್ಟು ಅತಿ ಹೆಚ್ಚು ಸ್ಥಾನ ಗಳಿಸಿದ, ಲೋಕಸಭಾ ಸ್ಪೀಕರ್‌ ಮತ್ತು ರಾಜ್ಯಸಭಾ ಮುಖ್ಯಸ್ಥರು ಗುರುತಿಸಿದ ಪಕ್ಷವು ಅಧಿಕೃತ ವಿಪಕ್ಷವೆಂದು ಕರೆಸಿಕೊಳ್ಳುತ್ತದೆ.

ಅಂದರೆ ಇಲ್ಲಿ ಶೇ.10ರಷ್ಟುಸ್ಥಾನ ಪಡೆಯಲೇಬೇಕೆಂಬ ನಿಯಮ ಇಲ್ಲ. ಆದರೆ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷ ಸ್ಥಾನ ಪಡೆಯಲು ಲೋಕಸಭೆಯ ಒಟ್ಟು ಸ್ಥಾನಗಳಲ್ಲಿ ಕನಿಷ್ಠ 55 ಸೀಟು ಪಡೆದಿರಬೇಕು ಎಂಬ ನಿಯಮ ರೂಪಿಸಿದವರು ಲೋಕಸಭೆಯ ಪ್ರಥಮ ಸ್ಪೀಕರ್‌ ಜಿ ವಿ ಮಾಳವಾಂಕರ್‌. ಇವರ ಅಧಿಕಾರಾವಧಿಯಲ್ಲಿ ಲೋಕಸಭೆಯಲ್ಲಿ ರಾಜಕೀಯ ಪಕ್ಷವೊಂದು ಅಧಿಕೃತ ವಿಪಕ್ಷ ಸ್ಥಾನ ಗಳಿಸಲು ಕೆಳಮನೆಯ ಒಟ್ಟು ಸದಸ್ಯಬಲದ ಶೇ.10ರಷ್ಟನ್ನು ಪಡೆದಿರಬೇಕು ಎಂದು ರೂಲಿಂಗ್‌ ನೀಡಿದ್ದರು. ಅದನ್ನು ಯಾವುದೇ ಸ್ಪೀಕರ್‌ ಇಲ್ಲಿಯವರೆಗೆ ಬದಲಿಸಿಲ್ಲ.

ಮೊದಲ ವಿಪಕ್ಷ ಬಂದಿದ್ದೇ ನೆಹರು ನಂತರ

ಭಾರತದಲ್ಲಿ 1969 ರ ವರೆಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ಸ್ಥಾನವೇ ಇರಲಿಲ್ಲ. ಪಂಡಿತ್‌ ಜವಾಹರ ಲಾಲ್‌ ನೆಹರು ನೇತೃತ್ವದ ಕಾಂಗ್ರೆಸ್‌ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿತ್ತು. ನೆಹರು ಕಾಂಗ್ರೆಸ್‌ 1951-52, 1957 ಮತ್ತು 1962ರ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿತ್ತು. ವಿರೋಧ ಪಕ್ಷಗಳು ಶೇ.10ರಷ್ಟುಸೀಟು ಪಡೆಯಲೂ ವಿಫಲವಾಗಿದ್ದವು.

ನೆಹರು ಸರ್ಕಾರದ ನಂತರ ಮೊದಲ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಲಭಿಸಿದ್ದು 1969-70ರಲ್ಲಿ. ನೆಹರು ಕಾಂಗ್ರೆಸ್‌ ಇಬ್ಭಾಗವಾದ ಬಳಿಕ 1971ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಆಗ ವಿರೋಧ ಪಕ್ಷವು ಕೇವಲ 16 ಸೀಟು ಪಡೆದಿತ್ತು. ಸಂಸತ್‌ ನಿಯಮದ ಪ್ರಕಾರ ಆಗಲೂ ಅಧಿಕೃತ ವಿಪಕ್ಷ ಸ್ಥಾನ ಇರಲಿಲ್ಲ. ಅದಾದ ಬಳಿಕ 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದಿದ್ದರು. ಆಗ ಜನತಾ ಪಕ್ಷ (ಜಾತ್ಯತೀತ) ಕೇವಲ 41 ಸ್ಥಾನ ಪಡೆದಿತ್ತು. ಆಗಲೂ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷ ಸ್ಥಾನ ಇರಲಿಲ್ಲ.

ಲೋಕಸಭೆಯ ಅಧಿಕೃತ ವಿಪಕ್ಷಗಳು

ಪಕ್ಷ ಅವಧಿ

ಕಾಂಗ್ರೆಸ್‌    1969-70

ಕಾಂಗ್ರೆಸ್‌ 1977-79

ಜನತಾ ಪಕ್ಷ ಜು.1979- ಆ. 1979

ಕಾಂಗ್ರೆಸ್‌    1989-1990

ಬಿಜೆಪಿ    1990-1996

ಕಾಂಗ್ರೆಸ್‌    16 ಮೇ 1996-ಮೇ 31 1996

ಬಿಜೆಪಿ    1996-97

ಕಾಂಗ್ರೆಸ್‌    1998-2004

ಬಿಜೆಪಿ    2004-2014

ಅತಿದೊಡ್ಡ ಪಕ್ಷಕ್ಕೆ ವಿಪಕ್ಷ ಸ್ಥಾನ ನೀಡಲು ಕಾಂಗ್ರೆಸ್‌ ಒತ್ತಾಯ

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯವಾಗಿ ಸೋತು 44 ಸೀಟು ಗಳಿಸಿತ್ತು. ಆದರೂ ತನಗೆ ಲೋಕಸಭೆಯ ಅಧಿಕೃತ ವಿಪಕ್ಷದ ಸ್ಥಾನ ನೀಡಬೇಕೆಂದು ಆಗ್ರಹಿಸಿತ್ತು. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಬಹಳ ಮುಖ್ಯ, ಸಿವಿಸಿ ಮತ್ತು ಸಿಬಿಐ, ಲೋಕಪಾಲ ಆಯ್ಕೆ ಸಮಿತಿಯಲ್ಲಿ ವಿಪಕ್ಷಕ್ಕೆ ಶಾಸನಬದ್ಧ ಅಧಿಕಾರಗಳಿವೆ.

ಹೀಗಾಗಿ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷವೊಂದು ಇರಬೇಕು ಎಂದು ಕಾಂಗ್ರೆಸ್‌ ವಾದಿಸಿತ್ತು. ಅಲ್ಲದೆ ವಿಪಕ್ಷಗಳಲ್ಲಿಯೇ ಅತಿ ಹೆಚ್ಚು ಸ್ಥಾನ ಪಡೆದ ಶಾಸಕಾಂಗ ಪಕ್ಷದ ನಾಯಕನನ್ನು ಪ್ರಮುಖ ಸಾಂವಿಧಾನಿಕ ಸಂಸ್ಥೆಗಳ ನೇಮಕಾತಿ ಸಮಿತಿಗೆ ಕಳುಹಿಸಿಕೊಡಲು ಕೆಲ ಕಾನೂನಿಗೆ ತಿದ್ದುಪಡಿ ತರಬೇಕೆಂದು ಕಾಂಗ್ರೆಸ್‌ ಆಗ್ರಹಿಸಿತ್ತು್ತ. ಈ ಪ್ರಕರಣವನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರ ವರೆಗೂ ಕೊಂಡೊಯ್ದಿತ್ತು. ಆದರೆ ಇಲ್ಲಿ ಲೋಕಸಭಾ ಸ್ಪೀಕರ್‌ ಅವರ ತೀರ್ಪು ಅಂತಿಮವಾಗಿರುತ್ತದೆ.

ಹೀಗಾಗಿ ಹಿಂದಿನ ನಿದರ್ಶನಗಳು ಮತ್ತು ಅಟಾರ್ನಿ ಜನರಲ್‌ ಅವರ ಅಭಿಪ್ರಾಯಗಳನ್ನು ಪಡೆದ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಕಾಂಗ್ರೆಸ್‌ನ ಬೇಡಿಕೆಯನ್ನು ತಿರಸ್ಕರಿಸಿದ್ದರು. ಆದರೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಪಾಲ, ಸಿಬಿಐ ಮುಖ್ಯಸ್ಥರ ಆಯ್ಕೆ ಸಮಿತಿಯಲ್ಲಿ ಒಬ್ಬರಾಗಿ ಸರ್ಕಾರ ಆಹ್ವಾನಿಸಿತ್ತು. ಆದರೂ ಅಧಿಕೃತ ವಿಪಕ್ಷ ನಾಯಕನ ಸ್ಥಾನ ತಮಗಿಲ್ಲ ಎಂಬ ಕಾರಣಕ್ಕೆ ಖರ್ಗೆ ಅವರು ಈ ಸಮಿತಿಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು.

ಸರ್ಕಾರದ ನಿರ್ಧಾರವೇ ಅಂತಿಮ

1985ರಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿದ್ದ ಟಿಡಿಪಿಗೆ (30 ಸ್ಥಾನ ಪಡೆದಿತ್ತು) ಆಗಿನ ಸಭಾಪತಿ ಬಲರಾಂ ಜಾಖಡ್‌ ಅಧಿಕೃತ ವಿಪಕ್ಷ ಸ್ಥಾನ ನೀಡಲು ನಿರಾಕರಿಸಿದ್ದರು. ಅಂತಿಮವಾಗಿ ಪಕ್ಷವೊಂದಕ್ಕೆ ವಿಪಕ್ಷ ಸ್ಥಾನ ನೀಡಬೇಕೋ ಅಥವಾ ಬೇಡವೋ ಎಂಬುದನ್ನು ಸರ್ಕಾರ ಅಥವಾ ಸ್ಪೀಕರ್‌ ಅವರಿಗೆ ನಿರ್ಧರಿಸುವ ಅಧಿಕಾರವಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ ವಿಪಕ್ಷ ಸ್ಥಾನ ಪಡೆಯಲು ಹತ್ತಿರವಿರುವುದರಿಂದ ಅದಕ್ಕೆ ಮೋದಿ ಸರ್ಕಾರ ವಿಪಕ್ಷ ಸ್ಥಾನ ನೀಡಬಹುದಾ? ಕಾದು ನೋಡಬೇಕಿದೆ.