"ಮೋದಿಯವರು ಸ್ಲೋಗನ್ ಕೊಡುವುದರಲ್ಲಿ ಸಿದ್ಧಹಸ್ತರು. ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ ಎಂದೆಲ್ಲಾ ಹೆಸರಿಡುತ್ತಾರೆ. ಆದರೆ, ಇವೆಲ್ಲಾ ಕೇವಲ ಕಾಗದದ ಮೇಲೆಯೇ ಉಳಿಯುತ್ತದೆ. ಸರಿಯಾದ ರೀತಿಯಲ್ಲಿ ಕಾರ್ಯಗತಗೊಳ್ಳುವುದೇ ಇಲ್ಲ. ಜಾಗತಿಕ ಸ್ಪರ್ಧಾತ್ಮಕತೆಯ ಸವಾಲುಗಳನ್ನು ಎದುರಿಸಲು ಸರಕಾರ ವಿಫಲವಾಗಿದೆ" ಎಂದು ವೇಣುಗೋಪಾಲ್ ವಿಶ್ಲೇಷಿಸಿದರು.
ಬೆಂಗಳೂರು(ಮೇ 26): ನರೇಂದ್ರ ಮೋದಿ ನೇತೃತ್ವದಲ್ಲಿ 3 ವರ್ಷ ಪೂರ್ಣಗೊಳಿಸಿದ ಎನ್'ಡಿಎ ಆಡಳಿತವನ್ನು ಕಾಂಗ್ರೆಸ್ ಪಕ್ಷವು "ಯೂ ಟರ್ನ್ ಸರ್ಕಾರ" ಎಂದು ಬಣ್ಣಿಸಿದೆ. ಯುಪಿಎ ಸರ್ಕಾರದ ಯೋಜನೆಗಳ ಹೆಸರು ಬದಲಿಸಿ, ಆ ಯೋಜನೆಗಳನ್ನ ಮುಂದುವರೆಸಿದ್ದೇ ಕೇಂದ್ರ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ ಸೇರಿ ಹಲವು ಗಣ್ಯರು ಸೇರಿದ್ದರು.
ಸಿದ್ದರಾಮಯ್ಯ ಹೇಳಿದ್ದೇನು?
ಚುನಾವಣೆಗೆ ಮುನ್ನ ಅನೇಕ ಆಶ್ವಾಸನೆಗಳನ್ನು ನೀಡಿದ್ದ ಮೋದಿಯವರು ಯೂಟರ್ನ್ ಹೊಡೆದದ್ದೇ ಹೆಚ್ಚು. ಆಧಾರ್ ಯೋಜನೆ, ಕಪ್ಪುಹಣ ವಾಪಸಾಗಿ, ಲೋಕಪಾಲ್ ಮಸೂದೆ, ಜಿಎಸ್'ಟಿ ಕಾಯ್ದೆ, 2 ಕೋಟಿ ಯುವಕರಿಗೆ ಉದ್ಯೋಗ ಇತ್ಯಾದಿ ವಿಚಾರಗಳಲ್ಲಿ ಮೋದಿ ಸರಕಾರ ಯೂಟರ್ನ್ ಹೊಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.
ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿದ್ದ ಯೋಜನೆಗಳಿಗೆ ಹೊಸ ಹೆಸರುಕೊಟ್ಟು ತಾನೇ ಸಾಧಿಸಿದ್ದು ಎಂದು ಎನ್'ಡಿಎ ಸರಕಾರ ಬೀಗುತ್ತಿದೆ ಎಂದೂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಇಂದಿರಾ ಆವಾಸ್ ಯೋಜನೆಯು ಪ್ರಧಾನಮಂತ್ರಿ ಆವಾಸ್ ಯೋಜನೆಯಾಯಿತು; ನಿರ್ಮಲ ಭಾರತ್ ಯೋಜನೆಯು ಸ್ವಚ್ಛ್ ಭಾರತ್ ಆಯ್ತು; ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆ(ಜೆಎನ್'ಎನ್'ಯುಆರ್'ಎಂ) ಅಮೃತ್ ಆಯಿತು; ಯೋಜನಾ ಆಯೋಗವು ನೀತಿ ಆಯೋಗ್ ಆಯಿತು; ಇ-ಗವರ್ನೆನ್ಸ್ ಯೋಜನೆಯು ಡಿಜಿಟಲ್ ಇಂಡಿಯಾ ಎಂಬ ಹೆಸರು ಪಡೆಯಿತು; ಫೈನಾನ್ಷಿಯಲ್ ಇನ್'ಕ್ಲೂಷನ್ ಎಂಬುದು ಜನ್ ಧನ್ ಯೋಜನೆಯಾಗಿ ರೂಪಾಂತರಗೊಂಡಿತು ಎಂದು ಸಿದ್ದರಾಮಯ್ಯ ಉದಾಹರಣೆಗಳನ್ನು ನೀಡಿದರು.
ವೇಣುಗೋಪಾಲ್ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಮೋದಿಯವರನ್ನು ಸ್ಲೋಗನ್ ಮೇಕರ್ ಎಂದು ಬಣ್ಣಿಸಿದರು. "ಮೋದಿಯವರು ಸ್ಲೋಗನ್ ಕೊಡುವುದರಲ್ಲಿ ಸಿದ್ಧಹಸ್ತರು. ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ ಎಂದೆಲ್ಲಾ ಹೆಸರಿಡುತ್ತಾರೆ. ಆದರೆ, ಇವೆಲ್ಲಾ ಕೇವಲ ಕಾಗದದ ಮೇಲೆಯೇ ಉಳಿಯುತ್ತದೆ. ಸರಿಯಾದ ರೀತಿಯಲ್ಲಿ ಕಾರ್ಯಗತಗೊಳ್ಳುವುದೇ ಇಲ್ಲ. ಜಾಗತಿಕ ಸ್ಪರ್ಧಾತ್ಮಕತೆಯ ಸವಾಲುಗಳನ್ನು ಎದುರಿಸಲು ಸರಕಾರ ವಿಫಲವಾಗಿದೆ" ಎಂದು ವೇಣುಗೋಪಾಲ್ ವಿಶ್ಲೇಷಿಸಿದರು.
"ಕೇಂದ್ರ ಸರಕಾರವು ಕೆಲವೇ ಉದ್ಯಮಿಗಳ 1,54,000 ಕೋಟಿ ರೂ ಸಾಲವನ್ನು ಮನ್ನಾ ಮಾಡಿದೆ. ಆದರೆ, ರೈತರಿಗೆ ಯಾವುದೇ ವಿನಾಯಿತಿ ನೀಡಿಲ್ಲ. 2016ರ ಒಂದೇ ವರ್ಷದಲ್ಲಿ ದೇಶದ 14 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಈ ದೇಶದಲ್ಲಿ ದಿನಕ್ಕೆ 35 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವೇಣುಗೋಪಾಲ್ ವಿಷಾದಿಸಿದರು.
ಮೋದಿ, ಮೊಯ್ಲಿ ಗೊಂದಲ:
ಇದೇ ವೇಳೆ, ಸಿಎಂ ಸಿದ್ದರಾಮಯ್ಯ ತಾವು ಮಾತನಾಡುವಾಗ ಪ್ರಧಾನಿ ಮೋದಿ ಎಂದು ಸಂಬೋಧಿಸುವ ಬದಲು ಮೊಯಿಲಿ ಎಂದು ಕರೆದು ಎಡವಟ್ಟು ಮಾಡಿದ ಘಟನೆ ನಡೆಯಿತು. ಆ ಸಂದರ್ಭದಲ್ಲಿ ಹಾಜರಿದ್ದವರೆಲ್ಲರೂ ನಕ್ಕರು. ಇದಕ್ಕೆ ಸಿಎಂ ಗರಂ ಕೂಡಾ ಆದರು. ಜೊತೆಗೆ ಕೇಂದ್ರ ಸರ್ಕಾರದ ವೈಫಲ್ಯದ ವಿಚಾರ ಎತ್ತಿದ ತಕ್ಷಣವೇ ಕರೆಂಟ್ ಕೈಕೊಟ್ಟ ಪ್ರಸಂಗ ಕೂಡ ನಡೆಯಿತು.
- ಶ್ರೀನಿವಾಸ ಹಳಕಟ್ಟಿ, ಪೊಲಿಟಿಕಲ್ ಬ್ಯೂರೋ, ಸುವರ್ಣ ನ್ಯೂಸ್
