ಬೆಂಗಳೂರು :  ಪೆಟ್ರೋಲ್‌-ಡೀಸೆಲ್‌ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಸೆ.10ರಂದು ಕರೆ ನೀಡಿರುವ ಭಾರತ ಬಂದ್‌ನಿಂದ ರಾಜ್ಯದಲ್ಲಿ ಸರ್ಕಾರಿ ಬಸ್‌ ಸೇವೆ, ಆ್ಯಪ್‌ ಆಧರಿತ ಟ್ಯಾಕ್ಸಿ , ಆಟೋ ಸೇವೆ ಸೇರಿದಂತೆ ಕೆಲ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಬಂದ್‌ಗೆ ರಾಜ್ಯದ ಆಡಳಿತಾರೂಢ ಜೆಡಿಎಸ್‌-ಕಾಂಗ್ರೆಸ್‌ ಬೆಂಬಲ ನೀಡಿರುವ ಕಾರಣ ಹರತಾಳ ಸಂಪೂರ್ಣ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದೆ.

ಇದೇ ವೇಳೆ, ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕ​ರ್‍ಸ್ ಯೂನಿಯನ್‌, ಓಲಾ-ಉಬರ್‌ ಟ್ಯಾಕ್ಸಿ ಫಾರ್‌ ಶೂರ್‌ ಮಾಲೀಕರ ಸಂಘ, ಕೆಲ ಆಟೋ ಚಾಲಕರ ಸಂಘಗಳು ಬಂದ್‌ಗೆ ಬೆಂಬಲ ಘೋಷಿಸಿದ್ದು, ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಾಹನಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿವೆ.

ಅಂತೆಯೇ ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆ ತರಕಾರಿ ಹಣ್ಣು ಸಗಟು ಮಾರಾಟಗಾರರ ಸಂಘ, ಕನ್ನಡ ಒಕ್ಕೂಟ, ಕನ್ನಡ ಸೇನೆ, ಜಯ ಕರ್ನಾಟಕ ಸಂಘಟನೆ ಸೇರಿದಂತೆ ಕೆಲ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಹಾಗಾಗಿ ಆ್ಯಪ್‌ ಆಧರಿತ ಟ್ಯಾಕ್ಸಿ, ಆಟೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಸೇವೆಯಲ್ಲಿ ವ್ಯತ್ಯಯವಾಗುವುದರಿಂದ ಬಂದ್‌ ಬಿಸಿ ತಟ್ಟು ಸಾಧ್ಯತೆಯಿದೆ.

ಅಖಿಲ ಕರ್ನಾಟಕ ಪೆಟ್ರೋಲ್‌ ಡೀಲ​ರ್‍ಸ್ ಅಸೋಸಿಯೇಷನ್‌, ಬೆಂಗಳೂರು ಪ್ರವಾಸಿ ವಾಹನಗಳ ಮಾಲೀಕರ ಸಂಘ, ರಾಜ್ಯ ಲಾರಿ ಮಾಲೀಕರ ಸಂಘ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಕೆಲ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ನೀಡಿದ್ದು, ಸೇವೆ ಮುಂದುವರಿಸಲು ನಿರ್ಧರಿಸಿವೆ.

ಇನ್ನು ಖಾಸಗಿ ಶಾಲಾ-ಕಾಲೇಜುಗಳನ್ನು ಎಂದಿನಂತೆ ಮುನ್ನಡೆಸಲು ನಿರ್ಧರಿಸಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಆಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಇನ್ನು ಸರ್ಕಾರಿ ಶಾಲಾ-ಕಾಲೇಜುಗಳ ರಜೆ ನೀಡುವ ಕುರಿತು ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಈ ನಡುವೆ ಕೆಲ ಸಂಘಟನೆಗಳು ಇದು ರಾಜಕೀಯ ಪ್ರೇರಿತ ಬಂದ್‌ ಎಂದು ಬೆಂಬಲ ನೀಡದಿರಲು ನಿರ್ಧರಿಸಿವೆ.

ಸಾರಿಗೆ ನೌಕರರಿಗೆ ಎಚ್ಚರಿಕೆ:

ಸರ್ಕಾರಿ ಬಸ್‌ ಸೇವೆ ಸ್ಥಗಿತಗೊಳಿಸುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಬಸ್‌ ಸೇವೆ ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದರಿಂದ ಕಡ್ಡಾಯವಾಗಿ ಸೇವೆ ನೀಡಬೇಕು. ಅಂದು ಎಲ್ಲ ನೌಕರರು ಕಡ್ಡಾಯ ಕರ್ತವ್ಯಕ್ಕೆ ಹಾಜರಾಗಬೇಕು. ಒಂದು ವೇಳೆ ಗೈರಾದರೆ ಆ ದಿನದ ವೇತನ ಕಡಿತಗೊಳಿಸುವುದರ ಜತೆಗೆ ಶಿಸ್ತು ಕ್ರಮ ಜರುಗಿಸುವುದಾಗಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ನೌಕರರಿಗೆ ಎಚ್ಚರಿಸಿದ್ದಾರೆ.

ಬಸ್‌ ರಸ್ತೆಗೆ ಇಳಿಯಲ್ಲ : ಎಐಟಿಯುಸಿ

ಆದರೆ, ಭಾರತ ಬಂದ್‌ಗೆ ಸಂಪೂರ್ಣ ಬೆಂಬಲವಿದೆ. ಸೋಮವಾರ ರಾಜ್ಯ ಸಾರಿಗೆಯ ನಾಲ್ಕು ನಿಗಮಗಳಿಂದ ಒಂದೇ ಒಂದು ಬಸ್‌ ರಸ್ತೆಗೆ ಇಳಿಯುವುದಿಲ್ಲ. ಕೆಎಸ್‌ಆರ್‌ಟಿಸಿಯಿಂದ ಅಂದು ಕರ್ತವ್ಯಕ್ಕೆ ಗೈರಾಗುವ ನೌಕರರಿಗೆ ವೇತನ ಕಡಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಇಂತಹ ಎಚ್ಚರಿಕೆಗೆ ನಾವು ಹೆದರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್‌-ಡೀಸೆಲ್‌ ದರ ಏರಿಸುತ್ತಲೇ ಬಂದಿವೆ. ಇದರಿಂದ ಜನಸಾಮಾನ್ಯರು ಸೇರಿದಂತೆ ಎಲ್ಲ ವಲಯಗಳಿಗೆ ಸಮಸ್ಯೆಯಾಗಿದೆ. ಹಾಗಾಗಿ ಬಂದ್‌ ಮೂಲಕ ಸರ್ಕಾರಗಳಿಗೆ ಬಿಸಿ ಮುಟ್ಟಿಸಬೇಕಿದೆ ಎಂದು ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕ​ರ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತ ಸುಬ್ಬರಾವ್‌ ಹೇಳಿದರು.

ಆದರೆ, ‘ಈ ಬಂದ್‌ಗೆ ಬಾಹ್ಯ ಬೆಂಬಲವಿದೆ. ಬಸ್‌ ಸಂಚಾರ ಸ್ಥಗಿತಗೊಳಿಸಿ ಬಂದ್‌ನಲ್ಲಿ ಭಾಗವಹಿಸುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಹಾಗಾಗಿ ನೈತಿಕ ಬೆಂಬಲ ನೀಡಿ ಎಂದಿನಂತೆ ಸೇವೆಗೆ ಹಾಜರಾಗುತ್ತವೆ’ ಎಂದು ಸಿಐಟಿಯು ಸಂಯೋಜಿತ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟದ ಜಂಟಿ ಕಾರ್ಯದರ್ಶಿ ಆನಂದ್‌ ಹೇಳಿದರು.

‘ಭಾರತ ಬಂದ್‌ಗೆ ನೈತಿಕ ಬೆಂಬಲವಿದೆ. ಪೆಟ್ರೋಲ್‌-ಡೀಸೆಲ್‌ ಹಾಗೂ ಗ್ಯಾಸ್‌ ದರ ನಿರಂತರ ಏರಿಕೆಯಿಂದ ಸಾರಿಗೆ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಾಗಾಗಿ ಬಂದ್‌ಗೆ ನೈತಿಕ ಬೆಂಬಲ ನೀಡುತ್ತೇವೆ’ ಎಂದು ಆಟೋರಿಕ್ಷಾ ಡ್ರೈವ​ರ್‍ಸ್ ಯೂನಿಯನ್‌ ಉಪಾಧ್ಯಕ್ಷ ಶ್ರೀನಿವಾಸ್‌ ತಿಳಿಸಿದರು.

ಜಿಎಸ್‌ಟಿ ವ್ಯಾಪ್ತಿಗೆ ತರಬೇಕು:

ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಕರೆ ನೀಡಿರುವ ಭಾರತ ಬಂದ್‌ನಿಂದ ಸಂಘಟನೆ ತಟಸ್ಥವಾಗಿರಲು ನಿರ್ಧರಿಸಿದೆ. ಏಕರೂಪ ದರ ಇಲ್ಲದಿರುವುದು, ನಿತ್ಯ ದರ ಪರಿಷ್ಕರಣೆಯಿಂದ ಸರಕು ಸಾಗಣೆ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ತಿಂಗಳು ತೈಲ ದರ ಏರಿಕೆಯೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 8 ದಿನ ಮುಷ್ಕರ ನಡೆಸಿ, ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದ್ದೇವು. ಆ ನಂತರವೂ ಪೆಟ್ರೋಲ್‌-ಡೀಸೆಲ್‌ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ಮಾತ್ರ ದರ ಕೊಂಚ ಕಡಿಮೆಯಾಗುತ್ತದೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಮ್ಮತದಿಂದ ಜಿಎಸ್‌ಟಿ ಅಡಿ ತರಬೇಕು ಎಂದು ಫೆಡರೇಶನ್‌ ಆಫ್‌ ಕರ್ನಾಟಕ ಸ್ಟೇಟ್‌ ಲಾರಿ ಓನ​ರ್‍ಸ್ ಅಂಡ್‌ ಏಜೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ಆಗ್ರಹಿಸಿದರು.

ಭಾರತ ಬಂದ್‌ಗೆ ಸಂಪೂರ್ಣ ಬೆಂಬಲವಿದೆ. ಒಲಾ, ಉಬರ್‌ ಕಂಪನಿಗಳಿಗೆ ನೋಟಿಸ್‌ ನೀಡಲಾಗಿದೆ. ಐಟಿ-ಬಿಟಿ ಕಂಪನಿಗಳಿಗೂ ಈ ಬಗ್ಗೆ ಗಮನಕ್ಕೆ ತರಲಾಗಿದೆ. ದಿನದಿಂದ ದಿನಕ್ಕೆ ತೈಲ ದರ ಗಗನಕ್ಕೇರುತ್ತಿದ್ದರೂ ಕೇಂದ್ರ ಸರ್ಕಾರ ಕ್ರಮ ಮುಂದಾಗದಿರುವುದು ಬೇಸರ ತಂದಿದೆ. ಹಾಗಾಗಿ ಬಂದ್‌ ಮೂಲಕ ಸರ್ಕಾರಕ್ಕೆ ಎಚ್ಚರ ನೀಡಬೇಕಿದೆ

- ಗಂಡಸಿ ಸದಾನಂದಸ್ವಾಮಿ, ಅಧ್ಯಕ್ಷ, ರಾಷ್ಟ್ರೀಯ ಚಾಲಕರ ಒಕ್ಕೂಟ

ಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಖಂಡಿಸಿ ಕಳೆದ ಮೂರು ದಿನಗಳ ಹಿಂದೆಯೇ ನಗರದಲ್ಲಿ ಪ್ರತಿಭಟಿಸಲು ತೀರ್ಮಾನಿಸಿದ್ದವು. ಈ ನಡುವೆ ಕಾಂಗ್ರೆಸ್‌ ಭಾರತ ಬಂದ್‌ಗೆ ಕರೆ ನೀಡಿರುವ ವಿಚಾರ ತಿಳಿದಿದ್ದರಿಂದ ಸೋಮವಾರ ನಡೆಯುವ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಕೇಂದ್ರ ಸರ್ಕಾರ ಕೋಡಲೇ ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಮತ್ತು ಕೂಡಲೇ ತೈಲ ದರ ಕಡಿಮೆ ಮಾಡಬೇಕು.

ತನ್ವೀರ್‌ ಪಾಷ, ಅಧ್ಯಕ್ಷ, ಒಲಾ, ಉಬರ್‌, ಟ್ಯಾಕ್ಸಿ ಫಾರ್‌ ಶೂರ್‌ ಚಾಲಕರು ಮತ್ತು ಮಾಲೀಕರ ಸಂಘ

 ಡೀಸೆಲ್‌-ಪೆಟ್ರೋಲ್‌ ದರ ಏರಿಕೆ ಖಂಡಿಸಿ ಕರೆ ನೀಡಿರುವ ಭಾರತ ಬಂದ್‌ಗೆ ಸಂಪೂರ್ಣ ಬೆಂಬಲವಿದೆ. ಈಗಾಗಲೇ ವ್ಯಾಪಾರಿಗಳಿಗೆ ವಿಷಯ ಮುಟ್ಟಿಸಿದ್ದೇವೆ. ಡೀಸೆಲ್‌ ದರ ಹೆಚ್ಚಾಗಿರುವುದರಿಂದ ಹಣ್ಣು-ತರಕಾರಿ ಸಾಗಣೆ ವೆಚ್ಚವೂ ಹೆಚ್ಚಾಗಿದ್ದು, ರೈತರಿಗೆ ಹೊರೆಯಾಗಿದೆ. ಹಾಗಾಗಿ ಸೋಮವಾರ ಸಂಪೂರ್ಣವಾಗಿ ಮಾರುಕಟ್ಟೆಮುಚ್ಚಿ ಬಂದ್‌ ಬೆಂಬಲಿಸಲಾಗುವುದು.

ಆರ್‌.ವಿ.ಗೋಪಿ, ಅಧ್ಯಕ್ಷ, ಕೆ.ಆರ್‌.ಮಾರುಕಟ್ಟೆತರಕಾರಿ-ಹಣ್ಣು ಸಗಟು ಮಾರಾಟಗಾರರ ಸಂಘ

ತೈಲ ದರ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ಚಿತ್ರ ಮಂದಿರಗಳ ಬಂದ್‌ ಮಾಡುವ ಬಗ್ಗೆ ದಿಢೀರ್‌ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಆದರೂ ಸೋಮವಾರ ನಡೆಯುವ ಬಂದ್‌ಗೆ ನೈತಿಕ ಬೆಂಬಲ ನೀಡುತ್ತೇವೆ.

- ಚಿನ್ನೇಗೌಡ, ಅಧ್ಯಕ್ಷ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ

ಬಂದ್‌ಗೆ ಜೆಡಿಎಸ್‌, ಎಡಪಕ್ಷಗಳು ಕೂಡ ಬೆಂಬಲಿಸಿವೆ. ರಾಜ್ಯದಲ್ಲಿ ಹಲವು ಸಂಘಟನೆಗಳು ನಮಗೆ ಬೆಂಬಲಿಸಿವೆ. ವಾಟಾಳ್‌ ಪಕ್ಷ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆ, ರಾಜ್‌ಕುಮಾರ್‌ ಸಂಘ, ಓಲಾ, ಉಬರ್‌, ಸಾರಿಗೆ ಯೂನಿಯನ್‌, ಖಾಸಗಿ ಟ್ಯಾಕ್ಸಿ, ಟೂ​ರ್‍ಸ್ ಆ್ಯಂಡ್‌ ಟ್ರಾವೆಲ್ಸ್‌ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ


ಏನೇನು ಇರುತ್ತೆ?

ಪೆಟ್ರೋಲ್‌ ಬಂಕ್‌, ಹೋಟೆಲ್‌, ರೆಸ್ಟೋರೆಂಟ್‌, ಚಿತ್ರ ಮಂದಿರ, ವಿಮಾನ, ರೈಲು, ನಮ್ಮ ಮೆಟ್ರೋ, ಸರಕು ಸಾಗಣೆ ವಾಹನ, ಪ್ರವಾಸಿ ವಾಹನಗಳು, ಆಸ್ಪತ್ರೆ, ಔಷಧ ಅಂಗಡಿಗಳು

ಯಾವುದು ಡೌಟು?

ಕೆಎಸ್ಸಾರ್ಟಿಸಿ/ಬಿಎಂಟಿಸಿ ಬಸ್‌ ಸೇವೆ, ಆ್ಯಪ್‌ ಆಧರಿತ ಟ್ಯಾಕ್ಸಿ, ಆಟೋ ಸೇವೆ, ಮಾರುಕಟ್ಟೆ ಬಂದ್‌, ಶಾಲೆ-ಕಾಲೇಜು ರಜೆ ಸಾಧ್ಯತೆ

ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ  : 

ಪದೇ ಪದೇ ಬಂದ್ ಮಾಡೋದ್ರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಲಿದ್ದು, ಹಾಗಾಗಿ ಭಾರತ ಬಂದ್ ಗೆ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ಇನ್ನು ಬಂದ್ ಬಿಸಿ ಹೆಚ್ಚಾಗಿರುವ ಕಡೆ ರಜೆ ನೀಡಬೇಕಾ ಬೇಡವೇ ಎಂಬುದನ್ನು ಶಾಲಾ ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಬಹುದು ಎಂದು ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ. 

ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ..?

ಜಿಲ್ಲೆಯಲ್ಲಿ ಶಾಲಾ - ಕಾಲೇಜುಗಳಿಗೆ ರಜೆ ನೀಡಬೇಕೆ ಬೇಡವೇ ಎನ್ನುವುದು ಜಿಲ್ಲಾಧಿಕಾರಿಗಳು ನಿರ್ಧಾರ ಮಾಡಲಿದ್ದಾರೆ  ಎಂದು ಅಧಿಕಾರಿಗಳು ಹೇಳಿದ್ದಾರೆ.