ನವದೆಹಲಿ(ಆ.03): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ ಭಯದ ವಾತಾವರಣ ಹರಡಲು ಪ್ರಯತ್ನಿಸುತ್ತಿದ್ದು, ಭಾರೀ ಪ್ರಮಾಣದಲ್ಲಿ ಸೇನೆ ನಿಯೋಜಿಸುತ್ತಿರುವ ಹಿಂದಿನ ಉದ್ದೇಶ ಏನು ಎಂದು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ನವದೆಹಲಿಯಲ್ಲಿ ಇಂದು ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಕಣಿವೆಯಲ್ಲಿ ಮನಬಂದಂತೆ ಸೇನೆ ನಿಯೋಜಿಸುತ್ತಿರುವ ಮೋದಿ ಸರ್ಕಾರದ ಉದ್ದೇಶ ಏನು ಎಂದು ಪ್ರಶ್ನಿಸಿದರು.

ಅಮರನಾಥ್ ಯಾತ್ರಾರ್ಥಿಗಳಿಗೆ ಏಕಾಏಕಿ ರಾಜ್ಯ ಬಿಡುವಂತೆ ಆದೇಶ ನೀಡಿರುವುದು ರಾಜ್ಯದಲ್ಲಿ ಆತಂಕ ಸೃಷ್ಟಿ ಮಾಡಿದೆ ಎಂದು ಆಜಾದ್ ಆರೋಪಿಸಿದ್ದಾರೆ. ಅಪಾರ ಪ್ರಮಾಣದ ಭಕ್ತರು ರಾಜ್ಯ ಬಿಡಲು ಮುಂದಾಗಿರುವುದರಿಂದ ಸಾರಿಗೆ ವ್ಯವಸ್ಥೆಯಲ್ಲೂ ಕೂಡ ವ್ಯತ್ಯಯ ಉಂಟಾಗಿದೆ ಎಂದು ಅವರು ಆರೋಪಿಸಿದರು.

ಕಣಿವೆಯಲ್ಲಿ ಏನಾಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ. ಈ ಪರಿಸ್ಥಿತಿ ಉದ್ಭವಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರವೇ ಈ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಜಾದ್ ಆಗ್ರಹಿಸಿದ್ದಾರೆ.