ಬೆಂಗಳೂರು :  ಬಜೆಟ್‌, ಸಾಲಮನ್ನಾ, ಸಮನ್ವಯ ಸಮಿತಿಯ ನಿರ್ಲಕ್ಷ್ಯ, ಏಕಪಕ್ಷೀಯ ನಿರ್ಧಾರಗಳು... ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದಲ್ಲಿ ಮೂಡಿರುವ ಗೊಂದಲಕ್ಕೆ ಈ ಕಾರಣಗಳನ್ನು ನೀಡಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನಡುವೆ ಹೆಚ್ಚುತ್ತಿರುವ ಈ ಭಿನ್ನಾಭಿಪ್ರಾಯ ಇದೀಗ ಜಾತಿ ಸ್ವರೂಪ ಪಡೆಯಲು ಈ ಎಲ್ಲಾ ಕಾರಣಗಳಿಗಿಂತ ಪ್ರಧಾನ ಕಾರಣವೊಂದಿದೆ. ಅದು ಅಧಿಕಾರಿಗಳ ವರ್ಗಾವಣೆ ಎಂದೇ ಕಾಂಗ್ರೆಸ್‌ ಮೂಲಗಳು ಹೇಳುತ್ತಿವೆ.

ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಆಯಕಟ್ಟಿನ ಜಾಗಗಳನ್ನು ಪಡೆದುಕೊಂಡಿದ್ದ ಕುರುಬ ಸಮುದಾಯದ ಅಧಿಕಾರಿಗಳನ್ನು ಟಾರ್ಗೆಟ್‌ ಮಾಡಿ ವರ್ಗಾವಣೆ ಮಾಡಲು ಮೈತ್ರಿಕೂಟ ಸರ್ಕಾರ ಮುಂದಾಗಿದೆ ಎಂಬುದು ಕುರುಬ ಸಮುದಾಯದ ಮುಖ್ಯ ಕೊರಗು.

ಐಎಎಸ್‌, ಕೆಎಎಸ್‌ ಹಾಗೂ ಇದೀಗ ಪಟ್ಟಿಸಜ್ಜಾಗುತ್ತಿದೆ ಎನ್ನಲಾದ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲೂ ಉದ್ದೇಶಪೂರ್ವವಾಗಿ ಕುರುಬ ಸಮುದಾಯದ ಅಧಿಕಾರಿಗಳನ್ನು ಅಮುಖ್ಯ ಹುದ್ದೆಗಳಿಗೆ ಎತ್ತಂಗಡಿ ಮಾಡುವ ಸಿದ್ಧತೆ ನಡೆಸಲಾಗುತ್ತಿದೆ. ಇಷ್ಟೇ ಅಲ್ಲದೆ, ಗೃಹ ಇಲಾಖೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು, ಡಿವೈಎಸ್‌ಪಿಗಳು ಹಾಗೂ ಎಸ್‌ಪಿಗಳ ವರ್ಗಾವಣೆ ನಡೆಸುವ ಉದ್ದೇಶವೂ ಇದೆ. ಬಹುತೇಕ ಬಜೆಟ್‌ ಅಧಿವೇಶನದ ನಂತರ ಈ ಪ್ರಕ್ರಿಯೆ ನಡೆಯುವ ಸೂಚನೆಗಳಿವೆ. ಮೂಲಗಳ ಪ್ರಕಾರ ಹಿಂದಿನ ಸರ್ಕಾರದ ಅವಧಿಯಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಪೊಲೀಸ್‌ ಅಧಿಕಾರಿಗಳು ಆಯಕಟ್ಟಿನ ಅದರಲ್ಲೂ ಬೆಂಗಳೂರು ನಗರದ ಪ್ರಮುಖ ಸ್ಥಾನಗಳಿಗೆ ವರ್ಗಾವಣೆ ಪಡೆದುಕೊಂಡಿದ್ದರು.

ಹೊಸ ಸರ್ಕಾರವು ಇಂತಹ ಅಧಿಕಾರಿಗಳನ್ನು ಗುರುತಿಸಿ ಪಟ್ಟಿಸಿದ್ಧಪಡಿಸುತ್ತಿದ್ದು, ಆ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸಜ್ಜಾಗಿದೆ ಎಂಬ ಸಂದೇಶ ಮಾಹಿತಿ ಹೊರ ಬಿದ್ದಿದೆ. ಇದು ಕುರುಬ ಅಧಿಕಾರಿಗಳನ್ನು ಕಂಗೆಡಿಸಿದ್ದು, ಈ ಅಧಿಕಾರಿಗಳು ತಮ್ಮ ಸಮುದಾಯದ ಸಂಘಟನೆ ಹಾಗೂ ಸ್ವಾಮೀಜಿಗಳ ಮೂಲಕ ಇಂತಹ ಬೆಳವಣಿಗೆ ನಡೆಯದಂತೆ ತಡೆಯಲು ಕುರುಬ ನಾಯಕರ ಮೇಲೆ ಒತ್ತಡ ತರುತ್ತಿದ್ದಾರೆ ಎನ್ನಲಾಗುತ್ತಿದೆ.

ಮುನ್ನೆಲೆಗೆ ಬಂದ ಬಾಲಕೃಷ್ಣೇಗೌಡ ಹೆಸರು:

ಕುತೂಹಲಕಾರಿ ಸಂಗತಿಯೆಂದರೆ, ಈ ವರ್ಗಾವಣೆ ಸಿದ್ಧತೆ ನಡೆದಿರುವ ಹಿನ್ನೆಲೆಯಲ್ಲೇ ದೇವೇಗೌಡರ ಹಿರಿಯ ಪುತ್ರ ಬಾಲಕೃಷ್ಣೇಗೌಡ ಅವರ ಹೆಸರು ಕಾಂಗ್ರೆಸ್‌ ವಲಯದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ. ನಿವೃತ್ತ (ಸ್ವಯಂ ನಿವೃತ್ತಿ ಪಡೆದಿದ್ದರು) ಕೆಎಎಸ್‌ ಅಧಿಕಾರಿಯಾದ ಬಾಲಕೃಷ್ಣೇಗೌಡ ಅವರು ಸರ್ಕಾರ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಯಾವ ವಿಚಾರಗಳಲ್ಲೂ ಇದುವರೆಗೂ ಕಾಣಿಸಿಕೊಂಡಿಲ್ಲ. ಆದರೆ, ವಿವಿಧ ಇಲಾಖೆಗೆ ಸಂಬಂಧಿಸಿದ ಪ್ರಮುಖ ಕಡತಗಳು ಮುಖ್ಯಮಂತ್ರಿ ಕಚೇರಿಯ ಒಪ್ಪಿಗೆ ಪಡೆಯಬೇಕಾದರೆ ಅದು ಬಾಲಕೃಷ್ಣೇಗೌಡ ಅವರ ಅವಗಾಹನೆಗೆ ಬರುವುದು ಅನಿವಾರ್ಯ ಎಂಬಂತಹ ಪರಿಸ್ಥಿತಿಯಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತವೆ.

ಈ ಮೂಲಗಳ ಪ್ರಕಾರ ಹಾಲಿ ಸಿದ್ದಗೊಳ್ಳುತ್ತಿರುವ ಅಧಿಕಾರಿಗಳ ವರ್ಗಾವಣೆ ಪಟ್ಟಿಯೂ ಬಾಲಕೃಷ್ಣೇಗೌಡರ ಆಣತಿಯಂತೆ ಸಜ್ಜಾಗುತ್ತಿದ್ದು, ಅದರಲ್ಲಿ ಕುರುಬ ಸಮುದಾಯದ ಅಧಿಕಾರಿಗಳನ್ನು ಆಯಕಟ್ಟಿನ ಜಾಗದಿಂದ ಎತ್ತಂಗಡಿಗೆ ಸಿದ್ಧತೆ ನಡೆದಿದೆ ಎಂಬ ಸಂದೇಶ ಸಮುದಾಯದಲ್ಲಿ ಹಬ್ಬಿದೆ. ಇದರಿಂದ ಕಂಗೆಟ್ಟಿರುವ ಕುರುಬ ಸಮುದಾಯದ ಅಧಿಕಾರಿಗಳು ತಮ್ಮ ಸಮುದಾಯದ ಸಂಘಟನೆ, ಮಠಗಳು ಹಾಗೂ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದು, ಇದನ್ನು ತಡೆಯುವಂತೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.