ಸಿನಿಮಾ, ರಾಜಕೀಯ, ಜೂಜು, ಪ್ರೇಮ, ಯುದ್ಧದಲ್ಲಿ ಗೆದ್ದ ಕುಮಾರಸ್ವಾಮಿಗೆ ಖಾಸಗಿ ಪತ್ರ

confidential-letter-to-karnataka-cm-ace-gambler-hd-kumaraswamy
Highlights

ರಾಜಕಾರಣ ಒಂದು ಜೂಜು, ಸಿನಿಮಾ ಒಂದು ಜೂಜು, ಪ್ರೇಮ - ಹ! ಅದೊಂದು ಮಹಾ ಜೂಜು! ದಾಳಗಳನ್ನು ಉರುಳಿಸುತ್ತಾ ಕಾಲಚಕ್ರದ ಉರುಳಲ್ಲಿ ಗೆಲ್ಲುತ್ತಾ, ಸೋಲುತ್ತಾ, ಗೆಲ್ಲುತ್ತಾ  ಮತ್ತೆ ತೇಜೋಮಯರಾಗಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗಳಿಗೆ ಪತ್ರಕರ್ತ, ಲೇಖಕ ಮತ್ತು ಅಂಕಣಕಾರ ಜೋಗಿ ಅವರು ಬರೆದ ಬಹಿರಂಗ ಪತ್ರವನ್ನು ನೀವಿಲ್ಲಿ ಓದುತ್ತಿದ್ದೀರಿ.ವಿಷಯ ಗುಟ್ಟಾಗಿಯೇ ಇರಲಿ. ವಾಟ್ಸ್ಯಾಪ್ ಮತ್ತಿತರ ಸಾಮಾಜಿಕ ತಾಣಗಳಲ್ಲಿ ಈ ಪತ್ರವನ್ನು ಹಂಚಿಕೊಳ್ಳದಿರುವುದು ಕ್ಷೇಮ!

- ಸಂಪಾದಕ

ಕುಮಾರಸ್ವಾಮಿಗಳಿಗೆ ಸಸ್ನೇಹ ವಂದನೆ,

ನಿಮ್ಮನ್ನು ಮುಖತಃ ನೋಡದೇ ಬಹಳ ಕಾಲವೇ ಆಯಿತು. ನಿಮ್ಮ ಮಗನ ಮೊದಲ ಸಿನಿಮಾ ತಯಾರಿಯಲ್ಲಿ ತೊಡಗಿಕೊಂಡಾಗ ನಿರ್ಮಾಪಕರಾಗಿ ಸಿಕ್ಕಿದ್ದಿರಿ. ನಿಮ್ಮ ಸಿನಿಮಾ ಕನಸುಗಳನ್ನು ಹಂಚಿಕೊಂಡಿದ್ದಿರಿ. ಆ ಹೊತ್ತಿಗೆ ನಿಮಗೆ ರಾಜಕೀಯ ಕನಸುಗಳಾಗಲೀ ಕನವರಿಕೆಗಳಾಗಲೀ ಇದ್ದಂತೆ ಅನ್ನಿಸುತ್ತಿರಲಿಲ್ಲ. ರಾಜಕೀಯದ ಸುವರ್ಣ ಅಧ್ಯಾಯ ಮುಗಿದುಹೋಯಿತು ಎಂಬಂತೆ ನಿರುಮ್ಮಳದಿಂದಲೂ ನಿರ್ಭಾವುಕತೆಯಿಂದಲೂ ನೀವು ಇದ್ದಿರಿ ಅಂತ ನನಗೆ ನಿಮ್ಮನ್ನು ನೋಡಿದಾಗ ಭಾಸವಾಗುತ್ತಿತ್ತು.

ಬಹುಶಃ ನಿಮ್ಮ ಎಣಿಕೆ ಮೀರಿ ಮತ್ತೊಮ್ಮೆ ನೀವು ಎತ್ತರದ ಸ್ಥಾನಕ್ಕೆ ಏರಿದ್ದೀರಿ. ಅಥವಾ ರಾಜಕಾರಣದ ಸ್ಥಿತ್ಯಂತರಗಳು ನಿಮ್ಮನ್ನು ಚಕ್ರದ ಮೇಲುಭಾಗಕ್ಕೆ ತಂದು ನಿಲ್ಲಿಸಿವೆ. ಪ್ರಾದೇಶಿಕ ಪಕ್ಷವೇ ಕರ್ನಾಟಕಕ್ಕೆ ಸೂಕ್ತ ಎಂದು ನಂಬಿರುವ ನನ್ನಂಥವರಿಗೆ ಇದು ಸಂತೋಷದ ವಿಷಯವೇ. ಜಾತ್ಯತೀತ ಜನತಾದಳ ಕೊಂಚ ಚುರುಕಾಗಿದ್ದರೆ ಎಷ್ಟು ಚೆನ್ನಾಗಿತ್ತು ಅಂತಲೂ ಅನೇಕ ಸಲ ಅನ್ನಿಸುತ್ತಿರುತ್ತದೆ. ನಿಮ್ಮ ಪಕ್ಷದ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ ಅನ್ನುವುದಕ್ಕೆ ನಾಗಮಂಗಲದಲ್ಲಿ ಚೆಲುವರಾಯ ಸ್ವಾಮಿ ಸೋತದ್ದು, ಚಾಮುಂಡೇಶ್ವರಿಯಲ್ಲಿ ಜಿಟಿ ದೇವೇಗೌಡರು ಗೆದ್ದದ್ದು ಕೂಡ ಸಾಕ್ಷಿ. ಜನ ಮತ ಹಾಕುವುದು ತೆನೆ ಹೊತ್ತ ಮಹಿಳೆಯ ಗುರುತಿಗೆ. ಅಭ್ಯರ್ಥಿ ಅಲ್ಲಿ ಗೌಣ. ಮೊನ್ನೆ ಹೊಳೆನರಸೀಪುರದ ಊಬರ್ ಚಾಲಕನೊಬ್ಬ ಏಕವಚನದಲ್ಲಿ ದೇವೇಗೌಡರನ್ನು ವಾಚಾಮಗೋಚರ ಹೊಗಳುತ್ತಿದ್ದ. ಅವರಂಥ ರಾಜಕೀಯ ಮುತ್ಸದ್ದಿ, ಚಾಣಾಕ್ಷ ಹುಟ್ಟಿಯೇ ಇಲ್ಲ ಅಂತ ಕೊಂಡಾಡುತ್ತಿದ್ದ. ಹಾಗೆ ಹೊಗಳುವಾಗಲೂ ಆತ ಬಳಸುತ್ತಿದ್ದ ಭಾಷೆಯಲ್ಲಿ ಅದೇ 'ದೇಸೀತನ' ಇತ್ತು.

ನಿಮ್ಮ ಪಕ್ಷಕ್ಕೆ, ನಿಮಗೆ ಗೆಲ್ಲುವುದು ಗೊತ್ತು. ಗೆದ್ದ ನಂತರ ಏನು ಮಾಡಬೇಕೆಂದು ಗೊತ್ತಿಲ್ಲ ಅಂತ ಎಷ್ಟೋ ಸಲ ಅನ್ನಿಸುತ್ತಿರುತ್ತದೆ. ಸೋತು ಗೆಲ್ಲುವ ಕಲೆಯೂ ನಿಮಗೆ ಸಿದ್ಧಿಸಿದೆ. ಪ್ರೀತಿಯಲ್ಲೂ ರಾಜಕೀಯದಲ್ಲೂ ಸಿನಿಮಾದಲ್ಲೂ ನೀವು ಅನೇಕ ಸಲ ಸೋತು ಗೆದ್ದವರೇ ಅಲ್ಲವೇ? ಜನಕ್ಕೆ ನೀವಿಷ್ಟವಾಗುವುದು ಅದೇ ಕಾರಣಕ್ಕೆ. ನೀವು ಭಯಂಕರ ಶುದ್ಧ ಚಾರಿತ್ರ್ಯದ ನಾರಾಯಣ ನಂಬೂದಿರಿ ಥರ ಯಾವತ್ತೂ ವರ್ತಿಸಿದವರಲ್ಲ. ಜೂಜು, ಪ್ರೇಮ, ಯುದ್ಧ ಮತ್ತು ರಾಜಕಾರಣದಲ್ಲಿ ಅದಮ್ಯ ಹುಮ್ಮಸ್ಸಿನಿಂದಲೇ ತೊಡಗಿಸಿಕೊಂಡವರು. ರಾಜಕಾರಣ ಮತ್ತು ಸಿನಿಮಾ ಎರಡೂ ಜೂಜು ಅಂತ ಬಲ್ಲವರಂತೆ ಇದ್ದುಬಿಟ್ಟಿರಿ.

ನಿಮ್ಮನ್ನು ನಾನು ಹತ್ತಿರದಿಂದ ಕಂಡದ್ದು ಸಿನಿಮಾ ವರದಿಗಾರನಾಗಿದ್ದ ದಿನಗಳಲ್ಲಿ. ಆಗ ನಿಮಗೆ ರಾಜಕೀಯದ ಬಹುದೊಡ್ಡ ಕನಸುಗಳೇನೂ ಇದ್ದಂತಿರಲಿಲ್ಲ. ಒಂದು ಬಾರಿ ಗೆದ್ದು, ಎರಡು ಸಾರಿ ಸೋತು ಎಸ್. ನಾರಾಯಣ್ ಜೊತೆ ಸೇರಿಕೊಂಡು ಸೂರ್ಯವಂಶ ಸಿನಿಮಾ ಮಾಡಿದ್ದು. ಇಡೀ ಗಾಂಧೀನಗರವೇ ಸರಿಯಿಲ್ಲ, ಚಿತ್ರರಂಗವನ್ನೇ ಬದಲಾಯಿಸುತ್ತೇನೆ ಎಂದು ಅಬ್ಬರಿಸುತ್ತಿದ್ದದ್ದು, ಹಂಚಿಕೆ ವ್ಯವಸ್ಥೆಯನ್ನೇ ಜಾಲಾಡಿದ್ದು, ನಿರ್ಮಾಪಕರ ಸಂಘದಿಂದ ಹೊರಗೇ ಉಳಿದು ಗೆದ್ದು ತೋರಿಸಿದ್ದು- ಹೀಗೆ ಚಿತ್ರೋದ್ಯಮದಲ್ಲೂ ಒಂಚೂರು ಬಿರುಗಾಳಿ ಎಬ್ಬಿಸಿದವರು ನೀವು.

ನಿಮ್ಮ ಕೆಲವು ಪ್ರಸಂಗಗಳು ನೆನಪಿವೆ. ಯು ಆರ್ ಅನಂತಮೂರ್ತಿಯವರು ನಿಮ್ಮ ಬಗ್ಗೆ ಏನೋ ಅಂದಾಗ ಯಾರ್ರೀ ಅನಂತಮೂರ್ತಿ ಅಂತ ನೀವು ಕೇಳಿದ್ದಿರಿ. ನಂತರ ನೀವು ಉಪವಾಸ ಕೂತಿದ್ದಾಗ ಅನಂತಮೂರ್ತಿಯವರೇ ಬಂದು ಹಣ್ಣಿನ ರಸ ಕುಡಿಸಿದ್ದರು. ಹೇಳಿದ್ದನ್ನು ನೀವೂ ಕೇಳಿಸಿಕೊಂಡಿದ್ದನ್ನು ಅವರೂ ಮರೆತಿದ್ದರು. ರಾಜ್ ಕುಮಾರ್ ಅಪಹರಣ ಆದಾಗ ಇಡೀ ಉದ್ಯಮ ಸ್ತಬ್ಧವಾಗಿತ್ತು. ಆಗಷ್ಟೇ ನಿಮ್ಮ ನಿರ್ಮಾಣದ ಗಲಾಟೆ ಅಳಿಯಂದ್ರು ಸಿನಿಮಾ ತೆರೆಗೆ ಬರಲು ಸಿದ್ಧವಾಗಿತ್ತು. ಇಡೀ ಉದ್ಯಮ ಬಂದ್ ಆಚರಿಸುತ್ತಿದ್ದಾಗ ನೀವು ಸಿಡಿದೆದ್ದು ಸಿನಿಮಾ ರಿಲೀಸ್ ಮಾಡಿದಿರಿ. ಅವರು ಕಾಡಿಗೆ ಹೋಗಿದ್ದಾರೆ ಅಂತ ಉದ್ಯಮ ಬಂದ್ ಮಾಡೋದು ಯಾವ ನ್ಯಾಯ, ಕಾರ್ಮಿಕರ ಗತಿ ಏನು ಅಂತ ಕೂಗಾಡಿದಿರಿ. ಅಪ್ಪಾಜಿ ಕಾಡಿನಲ್ಲಿದ್ದಾಗಲೇ ಮಗ ಶಿವಣ್ಣ ನಟಿಸಿದ ಹಾಸ್ಯಮಯ ಚಿತ್ರ ತೆರೆಕಂಡಿತು. ಸೂಪರ್ ಹಿಟ್ ಕೂಡ ಆಯಿತು. ಒಂದು ಚಿತ್ರದ ಪತ್ರಿಕಾಗೋಷ್ಠಿಗೆ ಮೈಸೂರಿನಿಂದ ಬರುವುದಕ್ಕೆ ಹೆಲಿಕಾಪ್ಟರ್ ಬೇಕು ಅಂತ ನಾಯಕನಟ ಕೇಳಿದಾಗ, ಅವರು ಬರದಿದ್ದರೆ ಬೇಕಾಗಿಲ್ಲ ಅಂತ ಹೇಳಿದವರು ನೀವು. ಆ ಕಾಲಕ್ಕೆ ಆ ನಾಯಕ ನಟ ಸೂಪರ್ ಸ್ಟಾರು. ಅದೇ ಚಿತ್ರದ ನಾಯಕಿ ಇಶಾ ಕೊಪ್ಪೀಕರ್ ಕೊಂಚ ಉಡಾಫೆ ತೋರಿದಾಗ ನೀವದನ್ನು ಹತ್ತಿಕ್ಕಿದ್ದಿದೆ. ಪತ್ರಿಕಾಗೋಷ್ಠಿ ತಡವಾಗುತ್ತದೆ ಅಂತ ಪತ್ರಕರ್ತರೊಬ್ಬರು ರೇಗಾಡಿದಾಗ ನೀವು ನಿಮ್ಮ ಶಿಷ್ಯನಿಗೆ ಹೇಳಿ ಆತನನ್ನು ಪಕ್ಕಕ್ಕೆ ಕರೆದು 'ಬುದ್ಧಿ' ಹೇಳಿಸಿದ್ದೂ ಉಂಟು. ಆ ಮಟ್ಟಿಗೆ ನೀವು ಸೀದಾಸಾದಾ. ಪರೀಕ್ಷೆ ನಕಲು ಮಾಡುವುದನ್ನು ತಡೆಯುವುದಕ್ಕೆ ಬಂದ ಶಿಕ್ಷಕಿಯ ಬೆರಳು ಕಚ್ಚಿ ಓಡಿದ್ದಿರಿ ಅನ್ನುವುದನ್ನು ಮೊನ್ನೆ ನಿಮ್ಮ ಗುರುಗಳು ನೆನಪಿಸಿಕೊಂಡದ್ದನ್ನು ಓದಿದ ಮೇಲಂತೂ ನಿಮ್ಮ ನಡವಳಿಕೆಯ ಬಗ್ಗೆ ಯಾರಿಗೂ ಅಚ್ಚರಿಯಾಗಲಿಕ್ಕಿಲ್ಲ.

ನಾನು ದಕ್ಷಿಣ ಕನ್ನಡದವನು. ನಮ್ಮೂರಿನಲ್ಲಿ ನಿಮಗೆ ಅಷ್ಟೊಂದು ಮರ್ಯಾದೆ ಇಲ್ಲ. ಬಹುಶಃ ಇನ್ನೂ ನೂರು ವರ್ಷ ಸಂದರೂ ದಕ್ಷಿಣ ಕನ್ನಡದಲ್ಲಿ ನಿಮ್ಮ ಪಕ್ಷ ಗೆಲ್ಲುವುದು ಅನುಮಾನ. ನಮ್ಮೂರಿನ ಮಂದಿಗೆ ನಿಮ್ಮ ಬಗ್ಗೆ ದ್ವೇಷವೂ ಇಲ್ಲ, ಪ್ರೀತಿಯೂ ಇಲ್ಲ, ಅಭಿಮಾನವೂ ಇಲ್ಲ, ಗಾಢನಂಬಿಕೆಯೂ ಇಲ್ಲ. ಆಗಿಹೋದ ಅನೇಕ ಮುಖ್ಯಮಂತ್ರಿಗಳಂತೆ ನೀವು ಅನಾಹುತಕಾರಿ ಅಲ್ಲ ಅಂತ ಮಾತ್ರ ಅವರು ನಂಬಿದ್ದಾರೆ.

ಈ ಸಲ ನಿಮಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದ್ದು ಬಯಸದೇ ಬಂದ ಭಾಗ್ಯ ಏನಲ್ಲ. ಚುನಾವಣೆ ಘೋಷಣೆಯಾದ ದಿನದಿಂದಲೇ ನೀವು ಕಿಂಗ್ ಮೇಕರ್ ಅನ್ನುವ ಮಾತಿತ್ತು. ಆದರೆ ನೀವೇ ಕಿಂಗ್ ಆಗುತ್ತೀರಿ ಅಂತ ಯಾರೂ ಊಹಿಸಿರಲಿಲ್ಲ. ಅದು ಕಹಾನಿ ಮೇ ಟ್ವಿಸ್ಟ್.

ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆದಿದ್ದಕ್ಕೆ ನಿಮ್ಮ ಬಗ್ಗೆ ಅನೇಕರಿಗೆ ಪ್ರೀತಿಗೌರವ. ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಕ್ಕೆ ಸಿಟ್ಟು ಮತ್ತು ಅಸಹನೆ. ನೀವು ಮತ್ತು ಜಮೀರ್ ಒಬ್ಬರಿನ್ನೊಬ್ಬರ ಮುಖ ನೋಡಿಕೊಂಡು ಹೇಗಿರುತ್ತೀರಿ ಎಂಬ ಕುತೂಹಲ. ಜಮೀರ್ ಮಾತಿಗೆ ನೀವು ಸರಿಯಾದ ಉತ್ತರವನ್ನು ಕ್ರಿಯೆಯ ಮೂಲಕ ಕೊಟ್ಟಿದ್ದೀರಿ ಎಂಬ ಹೆಮ್ಮೆ. ಹೀಗೆ ಒಬ್ಬೊಬ್ಬರ ಕಣ್ಣಲ್ಲಿ ನಿಮ್ಮ ಒಂದೊಂದು ರೂಪರೇಖೆ. ಒಂದೇ ಮಾತಲ್ಲಿ ಹೇಳುವುದಾದರೆ ನಿಮ್ಮನ್ನು ಪ್ರೀತಿಸುವುದಕ್ಕೆ ಎಷ್ಟು ಕಾರಣಗಳಿವೆಯೋ ದ್ವೇಷಿಸುವುದಕ್ಕೂ ಅಷ್ಟೇ ಕಾರಣಗಳು.

ಕಾಂಗ್ರೆಸ್ಸಿಗರ ದುರಾಸೆ ಮತ್ತು ಯಡಿಯೂರಪ್ಪನವರ ಹತಾಶೆ ಬಲ್ಲ ಎಲ್ಲರಿಗೂ ನೀವು ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೀರಿ ಅನ್ನುವ ನಂಬಿಕೆ ಖಂಡಿತಾ ಇಲ್ಲ. ನೀವು ಪದಗ್ರಹಣ ಮಾಡುವ ಹೊತ್ತಿಗೆ ಸರಿಯಾಗಿ ಜಡಿಮಳೆ ಸುರಿದಿರುವುದು ಶುಭಸೂಚನೆ ಅಂತ ನಂಬುತ್ತಾ, ನಿಮಗೆ ಶುಭ ಹಾರೈಸುವುದಷ್ಟೇ ಸದ್ಯದ ಕೆಲಸ. ರೈತರು ಸಾಲ ಮನ್ನಾ ಆಗಲಿ ಎಂದು ಕಾಯುತ್ತಿದ್ದಾರೆ. ನೀವು ಸಾಲ ಮನ್ನಾ ಮಾಡದಿರಲಿ ಅಂತ ಯಡಿಯೂರಪ್ಪ ಆಶಿಸುತ್ತಿದ್ದಾರೆ. ಈ ತೇಲು-ಮೇಲಾಟಗಳು ಮನ್ನಾ ಆಗಲಿ. ಎಲ್ಲರಿಗೂ ಒಳ್ಳೆಯದಾಗಲಿ.

ವ್ಯಾಸರಾಯ ಬಲ್ಲಾಳರ 'ಹೆಜ್ಜೆಗಳು' ಕಾದಂಬರಿಯನ್ನು ಸಿನಿಮಾ ಮಾಡುತ್ತೇನೆಂದು ಹೇಳಿ, ಅದರ ನೂರಾರು ಪ್ರತಿಗಳನ್ನು ಖರೀದಿಸಿ, ಪತ್ರಿಕಾಗೋಷ್ಠಿಯಲ್ಲಿ ಎಲ್ಲರಿಗೂ ಹಂಚಿದ್ದನ್ನು ಎಸ್ ನಾರಾಯಣ್ ಮರೆತಿರಲಿಕ್ಕಿಲ್ಲ. ಮತ್ತೊಮ್ಮೆ ನಿಮ್ಮನ್ನು ಸಿನಿಮಾ ನಿರ್ಮಾಪಕನಾಗಿ ನೋಡುವ ಆಶೆ ನನಗಂತೂ ಇಲ್ಲ. ಈಗ ನೀವು ಅದೇ ಮೊದಲ ದಿನಗಳ ಉತ್ಸಾಹದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರೆ ಮೊದಲಿಗಿಂತ ತುಸು ಹೆಚ್ಚೇ ರೇಗಾಡುತ್ತೀರೇನೋ? ರಾಜಕಾರಣ ಮತ್ತು ಸಿನಿಮಾ ಎರಡೂ ತೀರಾ ನಿರೀಕ್ಷಿತ ಆಗಿಬಿಟ್ಟಿವೆ. ಮನರಂಜನೆ, ಜನಬೆಂಬಲ ಕಳೆದುಕೊಂಡಿವೆ. ಕತೆಗಿಂತ ಚಿತ್ರಕತೆ ಮುಖ್ಯವಾಗಿದೆ. ಕೊನೆ ಏನೆಂಬುದು ಮೊದಲೇ ಗೊತ್ತಾಗಿಬಿಡುತ್ತದೆ. ಹೀಗಾಗಿ ಎರಡೂ ಅಂಥ ಆಸಕ್ತಿ ಉಳಿಸಿಕೊಂಡಿಲ್ಲ. ಮೌಲ್ಯವನ್ನಂತೂ ಯಾವತ್ತೋ ಕಳಕೊಂಡಿವೆ.

ಒಳ್ಳೆಯ ಕ್ಲೈಮ್ಯಾಕ್ಸಿರುವ ಸಿನಿಮಾದಂತೆ ನಿಮ್ಮ ರಾಜಕೀಯದ ಕತೆ ಸಾಗಲಿ. ನೀವು ಮುಖ್ಯಮಂತ್ರಿ ಆಗಿರುವುದು ಕ್ಲೈಮ್ಯಾಕ್ಸ್ ಅಲ್ಲ, ಗುಡ್ ಬಿಗಿನಿಂಗ್ ಮಾತ್ರ!

ನಮಸ್ಕಾರ.

ಜೋಗಿ

ಮರೆತ ಮಾತು: ಕನ್ನಡ ವಿಕಿಪಿಡಿಯಾ ಪುಟದಲ್ಲಿ ನಿಮ್ಮ ಬಗ್ಗೆ ಇರುವ ಮಾಹಿತಿ ಅಷ್ಟೇನೂ ಸರಿಯಾಗಿಲ್ಲ. ಅದನ್ನು ಯಾರಿಗಾದರೂ ಹೇಳಿ ಎಡಿಟ್ ಮಾಡಿಸುವುದು ಒಳ್ಳೆಯದು.

loader