Asianet Suvarna News Asianet Suvarna News

ಕರ್ನಾಟಕ ಕಾಂಗ್ರೆಸ್ ಗೆ ರಾಹುಲ್ ಸೂಚನೆ ಏನು..?

ಕರ್ನಾಟಕ ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಸೂಚನೆಯೊಂದನ್ನು ನೀಡಿದ್ದು ಅದೇ ಪ್ರಕಾರ ನಡೆದುಕೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಹೇಳಿದ್ದಾರೆ. 

Confident Karnataka Govt Will Compete 5 Years Term Says G Parameshwar
Author
Bengaluru, First Published Aug 30, 2018, 7:53 AM IST

ಬೆಂಗಳೂರು :  ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರಕ್ಕೆ ಇನ್ನೂ 100 ದಿನಗಳಷ್ಟೇ ಆಗಿದ್ದು, ಈಗಲೇ ಸಚಿವರ ಮೌಲ್ಯಮಾಪನ ಮಾಡುವುದಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸೂಚನೆಯಂತೆ ಸರ್ಕಾರಕ್ಕೆ ಆರು ತಿಂಗಳಾದ ಮೇಲೆ ಕಾಂಗ್ರೆಸ್‌ನ ಎಲ್ಲ ಸಚಿವರ ಕಾರ್ಯವೈಖರಿ ಮೌಲ್ಯಮಾಪನ ನಡೆಸಲಾಗುವುದು ಎಂದು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಮೈತ್ರಿ ಸರ್ಕಾರ ಗುರುವಾರ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಗರದ ಯವನಿಕಾ ಸಮಾಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರೇ ತಿಂಗಳಲ್ಲಿ ರೈತರ ಸಹಕಾರಿ ಬ್ಯಾಂಕ್‌, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸುಮಾರು 31 ಸಾವಿರ ಕೋಟಿ ರು.ಗಳಷ್ಟುಸಾಲ ಮನ್ನಾದಂತಹ ಮಹತ್ವದ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಿದೆ. ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಇಲ್ಲಿಯವರೆಗೆ ಉತ್ತಮ ರೀತಿಯಲ್ಲಿ ಆಡಳಿತ ನೀಡಿದ್ದು, ಸರ್ಕಾರದ ಸಾಧನೆಗೆ 10ಕ್ಕೆ 10 ಅಂಕ ನೀಡುವುದಾಗಿ ಸ್ವಯಂ ಘೋಷಿಸಿದರು.

ಈ ವೇಳೆ ಸಚಿವರ ಮೌಲ್ಯಮಾಪನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸದ್ಯ ಸರ್ಕಾರ 100 ದಿನಗಳನ್ನಷ್ಟೆಪೂರೈಸಿದೆ. ರಾಹುಲ್‌ ಗಾಂಧಿ ಅವರು ಪ್ರತಿ ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ಮಾಡುವಂತೆ ಹೇಳಿದ್ದಾರೆ. ಹಾಗಾಗಿ ಸದ್ಯ ಯಾವುದೇ ಮೌಲ್ಯಮಾಪನ ಮಾಡುವುದಿಲ್ಲ. ಆರು ತಿಂಗಳು ಪೂರ್ಣಗೊಂಡ ಬಳಿಕ ಕಾಂಗ್ರೆಸ್‌ನ ಎಲ್ಲ ಸಚಿವರ ಮೌಲ್ಯಮಾಪನ ಮಾಡುತ್ತೇವೆ ಎಂದು ಹೇಳಿದರು.

ಸರ್ಕಾರ ನಡೆಸುವ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಯಾವುದೇ ಗೊಂದಲವಿಲ್ಲ. ಆದರೆ, ವಿರೋಧ ಪಕ್ಷದವರು ಈ ಸಂವತ್ಸರ, ಆ ಸಂವತ್ಸರದಲ್ಲಿ ಸರ್ಕಾರ ಬೀಳುತ್ತದೆ ಎಂದು ಅನಗತ್ಯವಾಗಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ಸರ್ಕಾರವನ್ನು ಅಲುಗಾಡಿಸಲಾಗುವುದಿಲ್ಲ. ಸಣ್ಣಪುಟ್ಟಸಮಸ್ಯೆಗಳು ಬಂದರೆ ಅದನ್ನು ನಾವೇ ಬಗೆಹರಿಸಿಕೊಂಡು ಐದು ವರ್ಷ ಅಧಿಕಾರ ಪೂರೈಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಲ ಮನ್ನಾ ಅನುಷ್ಠಾನ:  ರೈತರು ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿದ್ದ 31 ಸಾವಿರ ಕೋಟಿ ರು.ನಷ್ಟುಸಾಲ ಮನ್ನಾಗೆ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಇದರ ಅನುಷ್ಠಾನಕ್ಕೆ ಎಲ್ಲಾ ರೀತಿಯ ನಿಯಮಗಳನ್ನು ಸಿದ್ಧಪಡಿಸಿ ಅನುಷ್ಠಾನಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ಇದರ ಜತೆಗೆ ಬಡವರು, ರೈತರು ಪಡೆದಿದ್ದ ಖಾಸಗಿ ಲೇವಾದೇವಿ ಸಾಲ, ಕೈ ಸಾಲಗಳನ್ನೂ ಮನ್ನಾ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಆಯವ್ಯಯದಲ್ಲಿನ ಕಾರ್ಯಕ್ರಮಗಳ ಜತೆಗೆ ಹಲವು ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

ನಗರಭಿವೃದ್ಧಿ ಸಚಿವನಾಗಿ ಬೆಂಗಳೂರಿನ ಸಮಸ್ಯೆಗಳ ನಿವಾರಣೆಗೆ ಸಾಕಷ್ಟುಕೆಲಸ ಮಾಡಿದ್ದೇನೆ. 8 ಕಿ.ಮೀ.ನಷ್ಟುಅನಧಿಕೃತ ಕೇಬಲ್‌ ತೆರವು, ಫ್ಲೆಕ್ಸ್ ತೆರವು, ನಾಡಪ್ರಭು ಕೆಂಪೇಗೌಡ ಲೇಔಟ್‌ ನಿವೇಶನ ಹಂಚಿಕೆ ಪ್ರಕ್ರಿಯೆ ಸೇರಿ ಹಲವು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಹೊಸದಾಗಿ ಪೆರಿಫರಲ್ ರಿಂಗ್‌ ರಸ್ತೆಗೆ ತ್ವರಿತ ಗತಿಯಲ್ಲಿ ಕೆಲಸ ಕೈಗೊಂಡಿದ್ದು, 13,500 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಜತೆಗೆ ಎರಡು ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.

ಡ್ಯಾಮೇಜ್‌ ಕಂಟ್ರೋಲ್‌ ಗೊತ್ತಿದೆ:  ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಲು ಬಿಜೆಪಿ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ಕಾಂಗ್ರೆಸ್‌ಗೆ ಡ್ಯಾಮೇಜ್‌ ಕಂಟ್ರೋಲ್‌ ಮಾಡೋದು ಗೊತ್ತಿದೆ. ಬಾಬೂರಾವ್‌ ಚಿಂಚನಸೂರು ಪಕ್ಷ ಬಿಟ್ಟಿದ್ದಾರೆ. ಆ ಭಾಗದಲ್ಲಿ ಇದರಿಂದ ಆಗುವ ಡ್ಯಾಮೇಜ್‌ ಸರಿಪಡಿಸಿಕೊಳ್ಳುತ್ತೇವೆ. ಕಾಂಗ್ರೆಸ್‌ಗೆ ಇಂತಹದ್ದು ಹೊಸದೇನೂ ಅಲ್ಲ ಎಂದು ಪರಮೇಶ್ವರ್‌ ಹೇಳಿದರು.

ಪ್ರಧಾನಿಯಿಂದ ಕೊಡಗು ನಿರ್ಲಕ್ಷ್ಯ:  ರಾಜ್ಯದಲ್ಲಿ ಕೊಡಗು, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಕರಾವಳಿ ಮತ್ತು ಮಲೆನಾಡಿನ ಕೆಲ ಜಿಲ್ಲೆಗಳಲ್ಲಿ ಅತಿವೃಷ್ಟಿಪ್ರವಾಹ ಉಂಟಾಗಿ ಸಾಕಷ್ಟುಜನರು ನಿರಾಶ್ರಿತರಾಗಿದ್ದಾರೆ. ಅತ್ತ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ಒಟ್ಟು 14 ಜಿಲ್ಲೆಗಳಲ್ಲಿ ಬರದ ವಾತಾವರಣ ನಿರ್ಮಾಣವಾಗಿದೆ. ಬರ ಮತ್ತು ನೆರೆ ಉಂಟಾಗಿರುವ ಎಲ್ಲ ಜಿಲ್ಲೆಗಳಿಗೂ ಸೂಕ್ತ ಪರಿಹಾರ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. ಆದರೆ, ಕೇಂದ್ರದಿಂದ ಈವರೆಗೆ ಯಾವುದೇ ಪರಿಹಾರ ಬಂದಿಲ್ಲದಿರುವುದು ದುರ್ದೈವ ಎಂದರು.

ನೆರೆಪೀಡಿತ ಕೊಡಗು ಮತ್ತಿತರ ಜಿಲ್ಲೆಗಳಲ್ಲಿ 3000 ಕೋಟಿ ರು. ನಷ್ಟಉಂಟಾಗಿದ್ದು, ಪರಿಹಾರ ಕಾರ್ಯಕ್ಕೆ 2000 ಕೋಟಿ ರು. ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ, ಈ ವರೆಗೆ ಒಂದು ಪೈಸೆಯನ್ನೂ ಪ್ರಧಾನಿ ಮೋದಿ ಸರ್ಕಾರ ನೀಡಿಲ್ಲ. ಕೇರಳ ನೆರೆ ಹಾವಳಿಗೆ ಪ್ರಧಾನಿ ಖುದ್ದು ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿದರು. ಆದರೆ ಕೊಡಗನ್ನು ನಿರ್ಲಕ್ಷಿಸಿದರು. ಗುರುವಾರ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವರನ್ನು ಮತ್ತೊಮ್ಮೆ ಪರಿಹಾರ ನೀಡಲು ಮನವಿ ಸಲ್ಲಿಸಲಾಗುವುದು ಎಂದರು.

Follow Us:
Download App:
  • android
  • ios