ಸೂಟ್‌ಕೇಸ್ ಇಲ್ಲದೆ ವಿಶ್ವವಿದ್ಯಾಲಯದ ಕೆಲಸಗಳಾಗುವುದಿಲ್ಲ ಎಂಬ ಮಲ್ಲಿಕಾಘಂಟಿ ಅವರ ಹೇಳಿಕೆಯು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಶ್ವವಿದ್ಯಾಲಯದ ಸಿಬ್ಬಂದಿ ನೇಮಕವಾಗಿರಬಹುದು, ಯಾವುದಾದರೂ ಕೆಲಸಗಳು ಆಗಬೇಕಾದರೂ ಸರ್ಕಾರಕ್ಕೆ ಲಂಚ ನೀಡಬೇಕು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರು(ಸೆ.17): ಹಂಪಿ ವಿಶ್ವವಿದ್ಯಾಲಯ ಕುಲಪತಿ ಮಲ್ಲಿಕಾಘಂಟಿ ಹೇಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಬ್ಬರು ಸಚಿವರ ವಿರುದ್ಧ ಭ್ರಷ್ಟ್ರಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದೂರು ದಾಖಲಾಗಿದೆ.

ಕರ್ನಾಟಕ ಕಾರ್ಮಿಕ ವೇದಿಕೆ ಅಧ್ಯಕ್ಷ ಎಚ್.ಬಿ.ನಾಗೇಶ್ ಎಂಬುವವರು ಶನಿವಾರ ಎಸಿಬಿಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರಮೇಶ್ ಕುಮಾರ್ ಮತ್ತು ಬಸವರಾಜ ರಾಯರೆಡ್ಡಿ ವಿರುದ್ಧ ದೂರು ದಾಖಲಾಗಿದೆ.

ಸೂಟ್‌ಕೇಸ್ ಇಲ್ಲದೆ ವಿಶ್ವವಿದ್ಯಾಲಯದ ಕೆಲಸಗಳಾಗುವುದಿಲ್ಲ ಎಂಬ ಮಲ್ಲಿಕಾಘಂಟಿ ಅವರ ಹೇಳಿಕೆಯು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಶ್ವವಿದ್ಯಾಲಯದ ಸಿಬ್ಬಂದಿ ನೇಮಕವಾಗಿರಬಹುದು, ಯಾವುದಾದರೂ ಕೆಲಸಗಳು ಆಗಬೇಕಾದರೂ ಸರ್ಕಾರಕ್ಕೆ ಲಂಚ ನೀಡಬೇಕು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸೂಟ್‌ಕೇಸ್ ವಿಷಯ ಪ್ರಸ್ತಾಪಿಸಿದ್ದಾರೆ. ಇದು ಕೆಲಸಗಳಾಗಬೇಕಾದರೆ ಲಂಚ ಪಡೆದಿದ್ದಾರೆ ಎಂಬುದಕ್ಕೆ ನಿರ್ದಶನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಬ್ಬರು ಸಚಿವರ ಜತೆಗೆ ಮಲ್ಲಿಕಾ ಘಂಟಿ ವಿರುದ್ಧವೂ ತನಿಖೆಯಾಗಬೇಕು. ಯಾರಿಗೆ ಲಂಚ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ತನಿಖೆ ಅಗತ್ಯ ಇದೆ ಎಂದು ಹೇಳಿದ್ದಾರೆ.