ಮೈಸೂರು (ಡಿ.28): ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿ ವಿರುದ್ಧ ಮೈಸೂರು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.

ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಗುರುವಾಯನಕೆರೆಯ ರಂಜನ್‌ರಾವ್ ಯರಡೂರ್ ಎಂಬವರು ಈ ದೂರು ದಾಖಲಿಸಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿ (1993-94) ಎಸ್. ಪ್ರಭಾಕರ್ ಹಾಗೂ ಕಾರ್ಯದರ್ಶಿ ಬಿ. ಯಶೋವರ್ಮ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ಪ್ರತಿವಾದಿಗಳು ಕರ್ನಾಟಕ ಭೂಸುಧಾರಣಾ ಕಾಯ್ದೆ 1961ರ ಸೆಕ್ಷನ್ 79-ಬಿ ಅನ್ನು ಉಲ್ಲಂಘಿಸಿ, ಮೈಸೂರು ಉಪ ವಿಭಾಗದಲ್ಲಿ ಅಕ್ರಮವಾಗಿ ಭೂ ವ್ಯವಹಾರ ನಡೆಸಿದ್ದಾರೆ ಎಂಬುದು ದೂರುದಾರರ ಆರೋಪ.

ಬೆಳ್ತಂಗಡಿ ತಾಲೂಕು ಉಜಿರೆಯಲ್ಲಿ ಕಚೇರಿ ಹೊಂದಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿಯು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1960ರ ಪ್ರಕಾರ ನೋಂದಾಯಿತವಾಗಿರುವ ಸಂಸ್ಥೆ. ಕರ್ನಾಟಕ ಭೂಸುಧಾರಣಾ ಕಾಯ್ದೆ 1961 ಸೆಕ್ಷನ್ 79-ಬಿ ಪ್ರಕಾರ, 1974ರ ಮಾ.1 ರ ನಂತರ ಈ ಸಂಸ್ಥೆಯು ಕೃಷಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವುದನ್ನು ನಿರ್ಬಂಧಿಸಲಾಗಿದೆ.

ಆದರೆ, ಎಸ್‌ಡಿಎಂಇ ಸೊಸೈಟಿಯು ರಾಜ್ಯಾದ್ಯಂತ ಹಲವಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿದೆ. ಮೈಸೂರು ಉಪ ವಿಭಾಗದ ಮೈಸೂರು ತಾಲೂಕಿನಲ್ಲಿಯೂ ಈ ರೀತಿ ಅಕ್ರಮ ವ್ಯವಹಾರ ನಡೆದಿದೆ. ಆದ್ದರಿಂದ ಈ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಅವರು ಕೋರಿದ್ದಾರೆ.

ಡಿ. ವೀರೇಂದ್ರ ಹೆಗ್ಗಡೆ ಅವರು ಕೃಷಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ಮೈಸೂರು ಉಪ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿ, ಅನುಮತಿ ಪಡೆದಿದ್ದಾರೆ. ಆದರೆ, ಇದು ಕಾನೂನುಬಾಹಿರ ಆದೇಶ. ಏಕೆಂದರೆ ಉಪ ವಿಭಾಗಾಧಿಕಾರಿಗೆ ಈ ರೀತಿ ಅನುಮತಿ ನೀಡಲು ಅವಕಾಶವಿಲ್ಲ. ಇದೇ ರೀತಿ ಪುತ್ತೂರು ತಾಲೂಕಿನಲ್ಲಿ ಮಾಡಿದ್ದ ಆದೇಶಗಳನ್ನು ರದ್ದುಪಡಿಸಲಾಗಿದೆ. ಅದೇ ರೀತಿ ಈ ಪ್ರಕರಣದಲ್ಲಿಯೂ ಕೂಡ ಕ್ರಮಕೈಗೊಳ್ಳಬೇಕು ಎಂಬುದು ಅರ್ಜಿದೂರರ ಮನವಿ.

ಬುಧವಾರ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ವಾದಿಯ ಪರವಾಗಿ ವಕೀಲ ಅ.ಮ. ಭಾಸ್ಕರ್, ಹಾಜರಾಗಿದ್ದರು. ಉಪ ವಿಭಾಗಾಧಿಕಾರಿ ಆನಂದ್ ಅವರು ಪ್ರಕರಣದ ವಿಚಾರಣೆಯನ್ನು ಜ.25 ಕ್ಕೆ ಮುಂದೂಡಿದ್ದಾರೆ.