Asianet Suvarna News Asianet Suvarna News

ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ: ಮುಖ್ಯ ಕಾರ್ಯದರ್ಶಿಯಿಂದ ಮತ್ತೊಂದು ಸಮಿತಿ ರಚನೆ

ವಿಚಾರಣೆ ವರದಿ ಸಲ್ಲಿಕೆಯಾದ ನಂತರ ಶ್ರೀಮಠಕ್ಕೆ ಆಡಳಿತಾಧಿಕಾರಿ ನೇಮಕದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಲಿದೆ ಎಂದು ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

Committee select for will administrator appoint
  • Facebook
  • Twitter
  • Whatsapp

ಬೆಂಗಳೂರು(ಮೇ.25): ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಮುನ್ನ ರಾಘವೇಶ್ವರ ಶ್ರೀಗಳ ಕುರಿತು ಮತ್ತು ಮಠದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಅವ್ಯವಹಾರಗಳ ಕುರಿತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಂದ ವಿಚಾರಣೆ ನಡೆಸಲು ಮುಖ್ಯ ಕಾರ್ಯದರ್ಶಿ ಸುಭಾಷ್​ ಚಂದ್ರ ಖುಂಟಿಆ ಆದೇಶಿಸಿದ್ದಾರೆ. ವಿಚಾರಣೆ ವರದಿ ಸಲ್ಲಿಕೆಯಾದ ನಂತರ ಶ್ರೀಮಠಕ್ಕೆ ಆಡಳಿತಾಧಿಕಾರಿ ನೇಮಕದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಲಿದೆ ಎಂದು ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ಈ ಆದೇಶದ ಪ್ರತಿ ಸುವರ್ಣನ್ಯೂಸ್​ಗೆ ಲಭ್ಯವಾಗಿದೆ.

ಎದುರ್ಕುಳ ಈಶ್ವರ ಭಟ್‌ ಸೇರಿದಂತೆ ಆರು ಜನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು (ಪಿಐಎಲ್‌)ವಿಚಾರಣೆ ನಡೆಸುತ್ತಿರುವ ಹೈಕೋರ್ಟ್​, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿಚಾರಣೆ ನಡೆಸಲು ಹೈಕೋರ್ಟ್ ಈ ಪ್ರಕರಣವನ್ನು ವರ್ಗಾಯಿಸಿತ್ತು. ಹೈಕೋರ್ಟ್​ ನಿರ್ದೇಶನದಂತೆ ವಾದಿ ಮತ್ತು ಪ್ರತಿವಾದಿಗಳ ಪರ ವಕಾಲತ್ತು ವಹಿಸಿರುವ ವಕೀಲರುಗಳ ಹೇಳಿಕೆ ಪಡೆದ ನಂತರ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಂದ ವಿಚಾರಣೆ ನಡೆಸಲು ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.

ಅರ್ಜಿದಾರರ ಆರೋಪಗಳ ಕುರಿತು ವಿಚಾರಣೆ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 3 ಮಂದಿ ಮೀರದಂತೆ ಸಣ್ಣ ವಿಚಾರಣೆ ಸಮಿತಿ ರಚಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ವಿಚಾರಣೆ ನಡೆಸಿದ ನಂತರ ವರದಿಯನ್ನು ಕಂದಾಯ ಇಲಾಖೆಯ ಅಧೀನದಲ್ಲಿರುವ ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸಬೇಕು. ಈ ವರದಿಯನ್ನು ಪರಿಶೀಲಿಸಿದ ನಂತರ ಶ್ರೀ ಮಠಕ್ಕೆ ಆಡಳಿತಾಧಿಕಾರಿ ನೇಮಕದ ಬಗ್ಗೆ ಸಂವಿಧಾನದ 162ನೇ ವಿಧಿ ಅನ್ವಯ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಘವೇಶ್ವರ ಶ್ರೀಗಳು ಮತ್ತು ರಾಮಚಂದ್ರಾಪುರ ಮಠದಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಅವ್ಯವಹಾರಗಳ ಕುರಿತು ಎಸಗಿರುವ ಆರೋಪಗಳ ಕುರಿತು ತನಿಖೆ ನಡೆಸಲು ಮೇಲ್ನೋಟಕ್ಕೆ ಸಾಬೀತಾಗುವಂತಹ ದಾಖಲೆಗಳು ಲಭ್ಯವಿದೆ. ಇದೊಂದು ಸೂಕ್ಷ್ಮ ಪ್ರಕರಣ ಆಗಿರುವ ಕಾರಣ ಇದರಲ್ಲಿ ಭಾವನಾತ್ಮಕ ಅಂಶಗಳು ಇರುವ ಕಾರಣ ಪೂರ್ಣ ಪ್ರಮಾಣದ ತನಿಖೆ ಅಗತ್ಯವಿದೆ ಎಂದು ಮುಖ್ಯ ಕಾರ್ಯದರ್ಶಿ ಸುಭಾಷ್​ ಚಂದ್ರ ಖುಂಟಿಆ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರಾಘವೇಶ್ವರ ಶ್ರೀಗಳು ಮಠಾಧಿಪತಿಯಾಗಿ ಅನುಸರಿಸಬೇಕಾದ ಧರ್ಮ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹಲವು ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.  ಮಠದ ಹಣಕಾಸು ವ್ಯವಹಾರಗಳಲ್ಲಿ ಭಾರಿ ಅವ್ಯವಹಾರ ನಡೆದಿರುವ ದೂರುಗಳಿವೆ ಎಂದು ಎದುರ್ಕುಳ ಈಶ್ವರ್​ ಭಟ್​ ಮತ್ತಿತರರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

Committee select for will administrator appoint

ಶ್ರೀಗಳು ತಮ್ಮ ನಡತೆಯಿಂದ ಮಠದ ಘನತೆಯನ್ನು ಕುಗ್ಗಿಸಿದ್ದಾರೆ. ಸರ್ಕಾರ ಮಠದ ದುರ್ವವ್ಯವಹಾರಗಳನ್ನು ಗಮನಿಸಿಯೂ ಕಣ್ಣು ಮುಚ್ಚಿ ಕುಳಿತಿದೆ. ನಾವು ಶ್ರೀಮಠದ ಅನನ್ಯ ಭಕ್ತರಾಗಿದ್ದು  ಇಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆಯಲು ಕೂಡಲೇ ಆಡಳಿತಾಧಿಕಾರಿ ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಈ ಪಿಐಎಲ್‌ ಸಲ್ಲಿಸುತ್ತಿದ್ದೇವೆ’ ಎಂದು ಅರ್ಜಿದಾರರು ವಿವರಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ನಿರ್ದೇಶನದ ಅನ್ವಯ ವಿಚಾರಣೆ  ನಡೆಸಲು ಮುಖ್ಯ ಕಾರ್ಯದರ್ಶಿಗಳಿಗೆ  ನಿರ್ದೇಶಿಸಲಾಗಿತ್ತು.

ಮುಖ್ಯ ಕಾರ್ಯದರ್ಶಿಯಾಗಿದ್ದ ಅರವಿಂದ್​ ಜಾಧವ್​ ಅವರು ನಿವೃತ್ತರಾಗುವ ಅತ್ಯಲ್ಪ ದಿನಗಳಲ್ಲಿ ಈ ಪ್ರಕರಣ ವಿಚಾರಣೆಗಾಗಿ ಅವರ ಮುಂದೆ ಬಂದಿತ್ತು. ನಿವೃತ್ತರಾದ ನಂತರ ಸುಭಾಷ್​ ಚಂದ್ರ ಖುಂಟಿಆ ಅವರು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡು ಕಡೆ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

ವರದಿ: ಮಹಂತೇಶ್, ಸುವರ್ಣ ನ್ಯೂಸ್

Follow Us:
Download App:
  • android
  • ios