ನವದೆಹಲಿ[ಜು.04]: ಈವರೆಗೂ ಇಂಗ್ಲಿಷ್‌ನಲ್ಲಷ್ಟೇ ಇರುತ್ತಿದ್ದ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಇದೀಗ ಕನ್ನಡದಲ್ಲೂ ಲಭ್ಯವಾಗುವ ದಿನಗಳು ಸನ್ನಿಹಿತವಾಗುತ್ತಿದೆ. ಕನ್ನಡ, ಹಿಂದಿ, ಅಸ್ಸಾಮಿ, ಮರಾಠಿ, ಒಡಿಯಾ, ತೆಲುಗು- ಹೀಗೆ ಆರು ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪು ಲಭ್ಯವಾಗಲಿದ್ದು ಮಾಸಾಂತ್ಯದೊಳಗೆ ಸುಪ್ರೀಂಕೋರ್ಟ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಆಗಲಿವೆ. ಈ ಸಂಬಂಧ ಸುಪ್ರೀಂಕೋರ್ಟಿನ ಆಂತರಿಕ ಎಲೆಕ್ಟ್ರಾನಿಕ್‌ ಸಾಫ್ಟ್‌ವೇರ್‌ ವಿಭಾಗ ಸಿದ್ಧಪಡಿಸಿರುವ ವೆಬ್‌ಸೈಟ್‌ಗೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಒಪ್ಪಿಗೆ ಸೂಚಿಸಿದ್ದಾರೆ.

ಸುಪ್ರೀಂಕೋರ್ಟಿನ ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುತ್ತಿರುವುದು ಇದೇ ಮೊದಲು. ಈಗಿರುವ ಪದ್ಧತಿ ಪ್ರಕಾರ, ನ್ಯಾಯಾಲಯ ಇಂಗ್ಲಿಷ್‌ನಲ್ಲಿ ನೀಡುವ ತೀರ್ಪುಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತಿದೆ. ಇನ್ನು ಪ್ರಾದೇಶಿಕ ಭಾಷೆಯಲ್ಲೇ ತೀರ್ಪಿನ ಪ್ರತಿ ನೀಡುವುದರಿಂದ ವಕೀಲರ ಸಹಾಯವಿಲ್ಲದೇ ಕಕ್ಷಿದಾರರು ತಮಗೆ ಸಂಬಂಧಿಸಿದ ಪ್ರಕರಣದ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ.

10 ದಿನ ಕಾಯಬೇಕು: ಇಂಗ್ಲಿಷ್‌ ತೀರ್ಪಿನ ಪ್ರತಿ ಆಯಾ ದಿನವೇ ವೆಬ್‌ಸೈಟ್‌ಗೆ ಅಪ್‌ಲೋಡ್‌ ಆಗುತ್ತವೆ. ಪ್ರಾದೇಶಿಕ ಭಾಷೆಗಳ ತೀರ್ಪಿನ ಪ್ರತಿಗಳನ್ನು ಪಡೆಯಲು ಒಂದು ವಾರದಿಂದ 10 ದಿನದವರೆಗೆ ಕಾಯಬೇಕಾಗುತ್ತದೆ. ಸಿವಿಲ್‌ ವ್ಯಾಜ್ಯ, ಕ್ರಿಮಿನಲ್‌ ಪ್ರಕರಣ, ಮಾಲೀಕರು- ಬಾಡಿಗೆದಾರರಿಗೆ ಸಂಬಂಧಿಸಿದ ವಿವಾದಗಳು, ಕೌಟುಂಬಿಕ ವಿಚಾರಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತೀರ್ಪಿನ ಪ್ರತಿಗಳು ಕೇವಲ ಇಂಗ್ಲಿಷ್‌ನಲ್ಲಷ್ಟೇ ಇರುವುದರಿಂದ ಪ್ರಾದೇಶಿಕ ಭಾಷೆಯಲ್ಲೂ ಕೊಡಿ ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರುತ್ತಿದ್ದರು. ಹೆಚ್ಚು ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮೊದಲಿಗೆ ಆರು ಭಾಷೆಗಳನ್ನು ಆಯ್ಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಮತ್ತಷ್ಟುಭಾಷೆಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.