ಬೆಂಗಳೂರು :  ಈಗಾಗಲೇ ರಾಜ್ಯದಲ್ಲೆಡೆ ಚಳಿಯ ಅಬ್ಬರ ಹೆಚ್ಚಾಗಿದ್ದು, ಇನ್ನೆರಡು ದಿನಗಳಲ್ಲಿ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಶೀತಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಕಡಿಮೆಯಾಗಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ವಾಡಿಕೆಗಿಂತ 2ರಿಂದ 3 ಡಿಗ್ರಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಉತ್ತರ ಕರ್ನಾಟಕದ ರಾಯಚೂರು, ವಿಜಯಪುರ, ಕೊಪ್ಪಳ, ಬೀದರ್‌ ಮೊದಲಾದ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದರು.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶೀತಗಾಳಿ ಪ್ರಮಾಣ ಹೆಚ್ಚಾಗಿರುವುದರಿಂದ ಚಳಿಯ ಪ್ರಮಾಣವೂ ಹೆಚ್ಚಾಗಿದೆ. ಇದೀಗ ಆ ಭಾಗಗಳಿಂದ ದಕ್ಷಿಣದ ಕಡೆಗೆ ಬೀಸುತ್ತಿರುವ ಗಾಳಿ ಶೀತದಿಂದ ಕೂಡಿರುವುದರಿಂದ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಚಳಿಯ ಪ್ರಮಾಣ ಏರಿಕೆಯಾಗಿದ್ದು, ಶೀತಗಾಳಿ ಎಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ ಇಂದಿನಂತೆ ಮುಂದಿನ ನಾಲ್ಕೈದು ದಿನ ಉಷ್ಣಾಂಶ ಸರಾಸರಿಗಿಂತ ಕಡಿಮೆ ಮುಂದುವರಿದರೆ ಶೀತಗಾಳಿ ಎಂದು ಘೋಷಿಸಲಾಗುತ್ತದೆ. ಚಳಿ ಹೆಚ್ಚಾಗಲು ಪ್ರಮುಖವಾಗಿ ಶೀತಗಾಳಿ ಹಾಗೂ ಶುಭ್ರ ವಾತಾವರಣ ಕಾರಣ ಎಂದು ಅವರು ಹೇಳಿದರು.

ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ 7.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.