ಸಮ್ಮಿಶ್ರ ಸರ್ಕಾರ ಹೊಸದಾಗಿ ಬಜೆಟ್‌ ಮಂಡಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌-ಜೆಡಿಎಸ್‌ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಶೀತಲಸಮರ ತಾರಕಕ್ಕೇರಿದೆ. ಪ್ರತ್ಯೇಕ ಬಜೆಟ್‌ ಬೇಕಿಲ್ಲವೆಂಬ ಸಿದ್ದರಾಮಯ್ಯ ನಿಲುವಿಗೆ ಕುಮಾರಸ್ವಾಮಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ದೋಸ್ತಿ ಸರ್ಕಾರದಲ್ಲಿ ‘ಬಜೆಟಾಪಟಿ’ ತೀವ್ರಗೊಂಡಿದೆ.

ಬೆಂಗಳೂರು (ಜೂ. 26): ‘ನಾನು ಬಜೆಟ್‌ ಮಂಡನೆ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ನಾನು ಬೇರೆಯವರ ರೀತಿ ಗಡಸು ಧ್ವನಿ ಮತ್ತು ದುರಹಂಕಾರದಿಂದ ಮಾತನಾಡಲ್ಲ. ನಾನು ಯಾರ ಹಂಗಿನಲ್ಲಿಯೂ ಇಲ್ಲ. ಎಷ್ಟುದಿನ ಅಧಿಕಾರದಲ್ಲಿರುತ್ತೇನೆ ಎಂಬುದಕ್ಕಿಂತ ಎಷ್ಟುದಿನ ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂಬುದು ಮುಖ್ಯ.’

ಇದು ಬಜೆಟ್‌ ಮಂಡನೆಗೆ ವಿರೋಧ ವ್ಯಕ್ತಪಡಿಸಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ನೀಡಿದ ತಿರುಗೇಟು.

ರೈತರ ಸಾಲಮನ್ನಾದಿಂದ ನನಗೇನೂ ಕಮಿಷನ್‌ ಬರುವುದಿಲ್ಲ. ರೈತರ ಸಾಲಮನ್ನಾ ವಿಚಾರದಲ್ಲಿ ಯಾರು ಕಮಿಷನ್‌ ಪಡೆದುಕೊಳ್ಳುತ್ತಾರೆ ಎಂಬುದು ಕೂಡ ನನಗೆ ಗೊತ್ತಿಗೆ ಎಂದೂ ಅವರು ತೀಕ್ಷ$್ಣವಾಗಿ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ರೈತರ ಸಾಲಮನ್ನಾ ಕುರಿತು ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರ ಸಭೆ ನಡೆಸಿ ಮಾತನಾಡಿದ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದರು.

ಬಜೆಟ್‌ ಮಂಡನೆ ಮತ್ತು ರೈತರ ಸಾಲಮನ್ನಾಗೆ ಸಂಬಂಧಿಸಿದಂತೆ ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ಸಂಪನ್ಮೂಲವನ್ನು ಹೇಗೆ ಕ್ರೋಢೀಕರಿಸಬೇಕು ಎಂಬುದು ಕಳೆದ 20 ತಿಂಗಳ ಆಡಳಿತಾವಧಿಯಲ್ಲಿ ಅನುಭವಕ್ಕೆ ಬಂದಿದೆ. ನಾನು ಬೇರೆಯವರಂತೆ ಗಡಸು ಧ್ವನಿ ಮತ್ತು ದುರಹಂಕಾರದಿಂದ ಮಾತನಾಡಲ್ಲ ಎಂದರು.

ಬಜೆಟ್‌ ಮಂಡಿಸುವ ಕುರಿತಂತೆ ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಬಹಿರಂಗವಾಗಿಯೇ ಅತೃಪ್ತಿ ಹೊರಹಾಕಿದ ಬೆನ್ನಲ್ಲೇ ಕುಮಾರಸ್ವಾಮಿ ಅವರು ಈ ರೀತಿ ಹೇಳಿರುವುದು ಮಹತ್ವ ಪಡೆದುಕೊಂಡಿದೆ.

ಹಕ್ಕುಚ್ಯುತಿ ಸಾಧ್ಯತೆ -ಸಿಎಂ:

ಬಜೆಟ್‌ ಮಂಡನೆ ಕುರಿತು ಚರ್ಚೆಗಳು ನಡೆಯುತ್ತಿವೆ. ಲೋಕಸಭಾ ಚುನಾವಣೆ ಬಳಿಕ ಬಜೆಟ್‌ ಮಂಡಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಬಜೆಟ್‌ ಮಂಡಿಸುತ್ತೇನೋ ಅಥವಾ ಇಲ್ಲವೋ ಗೊತ್ತಿಲ್ಲ ಎಂದರು.

ಈ ಹಿಂದಿನ ಸರ್ಕಾರದಲ್ಲಿದ್ದವರ ಪೈಕಿ ಸುಮಾರು 100 ಮಂದಿ ಶಾಸಕರು ಸೋಲು ಅನುಭವಿಸಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ನೂತನ ಶಾಸಕರು ಆಯ್ಕೆಗೊಂಡಿದ್ದಾರೆ. ಒಂದು ವೇಳೆ ಹಿಂದಿನ ಬಜೆಟ್‌ ಅಂಗೀಕರಿಸಿ ಲೇಖಾನುದಾನ ಪಡೆದರೆ ನೂತನವಾಗಿ ಆಯ್ಕೆಯಾಗಿರುವ 100 ಶಾಸಕರಿಗೆ ತೊಂದರೆಯಾಗಲಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಹಳೆ ಬಜೆಟ್‌ ಮುಂದುವರಿಸಿದರೆ ಒಂದು ರೀತಿಯ ಕಷ್ಟ, ಹೊಸ ಬಜೆಟ್‌ ಮಂಡಿಸಿದರೆ ಇನ್ನೊಂದು ರೀತಿಯ ಕಷ್ಟ. ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಅನುದಾನದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. ಹಳೆ ಬಜೆಟ್‌ ಮುಂದುವರಿಸಿದರೆ ನೂತನ ಶಾಸಕರು ಹಕ್ಕುಚ್ಯುತಿ ನಿಲುವಳಿ ಮಂಡಿಸಿದರೆ ಏನು ಮಾಡಬೇಕು? ನಾನು ಹಕ್ಕುಚ್ಯುತಿಗೊಳಗಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಜನರಿಗೆ, ರೈತರಿಗೆ ತಲುಪಬೇಕು. ಈ ಬಗ್ಗೆ ಪ್ರಾಮಾಣಿಕವಾಗಿ ಪರಾಮರ್ಶೆಯಾಗಬೇಕು. ಈ ಎಲ್ಲಾ ಕಾರಣಗಳಿಂದಾಗಿ ಹೊಸದಾಗಿ ಬಜೆಟ್‌ ಮಂಡನೆಗೆ ಮುಂದಾಗಿದ್ದೇನೆ ಎಂದು ಹೇಳಿದರು.

ಸಭೆಯಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಕೃಷಿ ಸಚಿವ ಶಿವಶಂಕರರೆಡ್ಡಿ, ಆರೋಗ್ಯ ಸಚಿವ ಶಿವಾನಂದ ಪಾಟೀಲ್‌, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ.ಎಸ್‌.ಸುಬ್ರಮಣ್ಯ ಸೇರಿದಂತೆ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರು, ಅಧಿಕಾರಿಗಳು ಭಾಗಿಯಾಗಿದ್ದರು. 

ಬಜೆಟ್‌ ಮಂಡನೆ ನಿಶ್ಚಿತ: ದೇವೇಗೌಡ

ಚುನಾವಣೆಗೆ ಮುನ್ನ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸುವ ಹೊಣೆಗಾರಿಕೆ ಇದೆ. ಜು.5ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡಿಸಲಿದ್ದಾರೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಆಗಲಿ, ಗೊಂದಲವಾಗಲಿ ಇಲ್ಲ. ಯಾರಿಗೂ ಈ ಬಗ್ಗೆ ಅನುಮಾನ ಬೇಡ. ಸಮ್ಮಿಶ್ರ ಸರ್ಕಾರ 5 ವರ್ಷಗಳ ಕಾಲ ಸುಗಮವಾಗಿ ನಡೆದುಕೊಂಡು ಹೋಗಲಿದೆ ಎಂದು ಉತ್ತರ ಕನ್ನಡ ಜಿಲ್ಲೆ ಇಡಗುಂಜಿ ಗಣಪತಿಗೆ ಪೂಜೆ ಸಲ್ಲಿಸಿದ ನಂತರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.