ಬೆಂಗಳೂರು[ಜೂ.23]: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಅನಿಶ್ಚಯತೆ ಕಾಡುತ್ತಿದ್ದು, ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಕಾದು ನೋಡುತ್ತೇವೆ. ಮೈತ್ರಿ ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದಿದ್ದರೆ ಲೋಕಸಭಾ ಚುನಾವಣೆ ಬಳಿಕ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು ಎಂದು ಸಮ್ಮಿಶ್ರ ಸರ್ಕಾರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟೀಕಾ ಪ್ರಹಾರ ನಡೆಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಸದಸ್ಯತ್ವ ಅಭಿಯಾನದ ದೂರವಾಣಿ ಸಂಖ್ಯೆಯನ್ನು ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅವರು, ಪುತ್ರ ಗ್ರಾಮ ವಾಸ್ತವ್ಯ ಮಾಡಿದರೆ, ಅಪ್ಪ ಮಧ್ಯಂತರ ಚುನಾವಣೆಗೆ ಹೋಗುತ್ತೇವೆ ಎನ್ನುತ್ತಾರೆ. ಬಿಜೆಪಿಯ 105 ಶಾಸಕರು ಮತ್ತು 20ಕ್ಕೂ ಹೆಚ್ಚು ಅನ್ಯ ಪಕ್ಷದ ಅತೃಪ್ತ ಶಾಸಕರು ನಮ್ಮ ಜತೆ ಇದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನೆಲಕಚ್ಚಿರುವ ಕಾಂಗ್ರೆಸ್‌-ಜೆಡಿಎಸ್‌ನವರಿಗೆ ಸರ್ಕಾರ ನಡೆಸುವುದು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಹೋಗಬಹುದು, ನಾವು ಸರ್ಕಾರ ರಚನೆ ಮಾಡುತ್ತೇವೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೇ ಹೇಳಿರುವಂತೆ ಹೆಚ್ಚು ದಿನ ಸಮ್ಮಿಶ್ರ ಸರ್ಕಾರ ಇರುವುದಿಲ್ಲ. ಮಿತ್ರ ಪಕ್ಷದವರಿಗೆ ಮಾನ-ಮರ್ಯಾದೆ ಇದ್ದಿದ್ದರೆ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜೀನಾಮೆ ನೀಡಬೇಕಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಮೈತ್ರಿ ಸರ್ಕಾರಕ್ಕೆ ಯೋಗ್ಯತೆ ಇದ್ರೆ ಆಡಳಿತ ಮಾಡಲಿ, ಇಲ್ಲದಿದ್ರೆ ನಾವು ಮಾಡ್ತೀವಿ’

ಜನತಾದರ್ಶನ ಎಂದು ಜನರಿಗೆ ಇಲ್ಲದ ಸುಳ್ಳು ಭರವಸೆ ನೀಡಿ ಮರಳು ಮಾಡುವುದು ಸಾಧ್ಯವಿಲ್ಲ. ಮಳೆಯ ಕುಂಟು ನೆಪ ಹೇಳಿ ಗ್ರಾಮವಾಸ್ತವ್ಯ ಮೊಟಕುಗೊಳಿಸಿ ಹಿಂತಿರುಗಿದ್ದಾರೆ. ಇದೆಲ್ಲಾ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನಾಟಕ. ಸರ್ಕಾರದ ಸಾಧನೆಯ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದ್ದು, ಅದನ್ನು ಗಮನಿಸಲಾಗಿದೆ. ಯಾವುದೇ ರೀತಿಯಲ್ಲಿಯೂ ಹೇಳಿಕೊಳ್ಳುವಂತಹ ಸಾಧನೆ ಮಾಡದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಗಮನಹರಿಸಬೇಕು. ಅದನ್ನು ಬಿಟ್ಟು ಈ ರೀತಿಯ ಆಟವಾಡುವುದು ಸರಿಯಲ್ಲ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಕುಂಠಿತವಾಗಿದೆ. ಬರ ಪರಿಸ್ಥಿತಿ ವೇಳೆ ಜನರ ಪರವಾಗಿ ನಿಲ್ಲಬೇಕು. ಆಡಳಿತ ಪಕ್ಷ ಏನು ಮಾಡುತ್ತದೋ ಇಲ್ಲವೋ ಗೊತ್ತಿಲ್ಲ. ಪ್ರತಿಪಕ್ಷವಾಗಿ ಬಿಜೆಪಿ ಶಾಸಕರು ಜವಾಬ್ದಾರಿ ಅರಿತು ಸ್ವಂತ ಖರ್ಚಿನಲ್ಲಿ ಕ್ಷೇತ್ರದಲ್ಲಿ ಸಂಚಾರ ಮಾಡಿ ಟ್ಯಾಂಕರ್‌ಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೈಗೊಂಡಿರುವ ಬರ ಪರಿಹಾರ ಕಾಮಗಾರಿಗಳ ಬಗ್ಗೆ ವಾರಕ್ಕೊಮ್ಮೆ ಕೇಂದ್ರ ಕಚೇರಿಗೆ ವರದಿ ಕಳುಹಿಸಿಕೊಡಬೇಕು ಎಂದು ಪಕ್ಷದ ಶಾಸಕರಿಗೆ ಸೂಚನೆ ನೀಡಿದರು.

ಬಿಎಸ್ ವೈ ಬಗ್ಗೆ ಎಚ್‌ಡಿಕೆ ಹೊಸ ಬಾಂಬ್

ರಾಜ್ಯದಲ್ಲಿ ಈಗಲೂ ಸಮೀಕ್ಷೆ ನಡೆಸಿದರೆ ಶೇ.100ಕ್ಕೆ 80 ಭಾಗ ಸರ್ಕಾರ ತೊಲಗಬೇಕು ಎಂಬುದು ಜನರ ಅಭಿಪ್ರಾಯವಾಗಿದೆ. ಹೆಚ್ಚು ದಿನ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ. ರಾಜ್ಯದಲ್ಲಿ ಸರ್ಕಾರ ಹಗಲು ದರೋಡೆ ನಡೆಸುತ್ತಿದೆ. ಕಾಮಗಾರಿ ನಡೆಯದಿದ್ದರೂ ಲೋಕೋಪಯೋಗಿ ಇಲಾಖೆಯಲ್ಲಿ ಬಿಲ್‌ ಪಾವತಿ ಮಾಡಲಾಗಿದೆ. ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದ ಅವರು, ಲೋಕಸಭೆ ಚುನಾವಣೆ ವೇಳೆ 43 ವಿಧಾನಸಭೆ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿದ್ದೇವೆ. ಸದಸ್ಯತ್ವ ಅಭಿಯಾನ ವೇಳೆ ಈ 43 ವಿಧಾನಸಭಾ ಕ್ಷೇತ್ರದತ್ತ ವಿಶೇಷ ಗಮನಹರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.