ದಾವಣಗೆರೆ [ಜೂ.28] : ರಾಜ್ಯದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಸಿದ್ಧವಿಲ್ಲ ಹೀಗೆಂದು ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ದಾವಣಗೆರೆಯಲ್ಲಿ ಮಾತನಾಡಿದ ಪೂಜಾರಿ, ರಾಜ್ಯದಲ್ಲಿ ಒಂದು ವೇಳೆ ಚುನಾವಣೆ ನಡೆದರೆ 150 ಸ್ಥಾನ ಗೆಲ್ಲುತ್ತೇವೆ  ಎನ್ನುವ ಭರವಸೆ ವ್ಯಕ್ತಪಡಿಸಿದರು. 

ಮೈತ್ರಿ ಮುಖಂಡರಾದ ದೇವೇಗೌಡರೇ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಾರೆ. ಸಮನ್ವಯದ ಕೊರತೆ ಇದೆ ಎನ್ನುವುದಕ್ಕೆ ಇದಕ್ಕಿಂತಲೂ ನಿದರ್ಶನ ಬೇಕಿಲ್ಲ ಎಂದರು.

ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಕಚ್ಚಾಟದಲ್ಲಿಯೇ ಮುಳುಗಿದೆ. ಇದರಿಂದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದು, ಇದರ ಹತಾಶೆಯಿಂದ ನಾಯಕರು ಮಾತನಾಡುತಿದ್ದಾರೆ. 

ಮೋದಿ ಬಗ್ಗೆಯೂ ಸಿಎಂ ಮಾತನಾಡುತಿದ್ದು, ಇಂತಹ ಹೇಳಿಕೆಗಳು ಅವರಿಗೆ ಶೋಭೆ ತರುವಂತದ್ದಲ್ಲ. ರಾಜ್ಯ ಮುಖ್ಯಮಂತ್ರಿ ಎಂದು ಜನ ಸಮಸ್ಯೆ ಹೇಳಿಕೊಳ್ಳಲು ಬರುತ್ತಾರೆ.  ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ.  

ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಈಗ ಜನರ ಸಮಸ್ಯೆ ಬಗೆಹರಿಸದೇ  ಪಂಚತಾರ ಹೋಟೆಲ್ ನಿಂದ ಅಮೆರಿಕಾಗೆ ಶಿಫ್ಟ್ ಆಗುತಿದ್ದಾರೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.