ಬೆಂಗಳೂರು[ಆ.03]: ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ವಿಧಾನಸೌಧಕ್ಕೆ ದಿಢೀರ್‌ ಭೇಟಿ ನೀಡಿದ ವೇಳೆ ಸಭೆಯಿಂದ ಹೊರಬಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೆಲ ಸಮಯ ಪ್ರತ್ಯೇಕವಾಗಿ ಚರ್ಚೆ ನಡೆಸಿರುವುದು ಕೂತೂಹಲಕ್ಕೆ ಕಾರಣವಾಯಿತು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಸರ್ಕಾರದ ಹಿರಿಯ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಡೆಸಿದರು. ವಿಧಾನಸೌಧದಕ್ಕೆ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಅವರೊಂದಿಗೆ ರಾಜಣ್ಣ ದಿಢೀರ್‌ ಭೇಟಿ ನೀಡಿದರು. ಸಭೆಯಲ್ಲಿದ್ದ ಯಡಿಯೂರಪ್ಪ ಅವರಿಗೆ ರಾಜಣ್ಣ ಆಗಮಿಸಿರುವುದು ಗೊತ್ತಾಗುತ್ತಿದ್ದಂತೆ ಸಭೆಯಿಂದ ಮಧ್ಯದಲ್ಲಿಯೇ ಹೊರಬಂದರು. ಈ ವೇಳೆ ಯಡಿಯೂರಪ್ಪ ಕಿವಿಯಲ್ಲಿ ಮಾತನಾಡಿದ್ದು ಕುತೂಹಲ ಕೆರಳಿಸಿತು.

ತುಮಕೂರು ಡಿಸಿಸಿ ಬ್ಯಾಂಕ್‌ ಅನ್ನು ಸಮ್ಮಿಶ್ರ ಸರ್ಕಾರ ಸೂಪರ್‌ ಸೀಡ್‌ ಮಾಡಿದ್ದು, ನಂತರ ನ್ಯಾಯಾಲಯವು ಸೂಪರ್‌ ಸೀಡ್‌ನಿಂದ ಬಿಡುಗಡೆಗೊಳಿಸಿತು. ಈ ಸಂಬಂಧ ಯಡಿಯೂರಪ್ಪ ಜತೆ ರಾಜಣ್ಣ ಮಾತುಕತೆ ನಡೆಸಿದರು ಎನ್ನಲಾಗಿದೆ. ಈ ವೇಳೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾದೇವಿ ಅವರನ್ನು ಕರೆಸಿ ಯಡಿಯೂರಪ್ಪ ಅವರು ಕೆಲ ಮಾಹಿತಿ ಪಡೆದುಕೊಂಡರು. ತರುವಾಯ ನಾಗಲಾಂಬಿಕಾ ದೇವಿ ಅವರಿಗೆ ಕೆಲವು ಸೂಚನೆಗಳನ್ನು ನೀಡಿರುವುದು ಕಂಡುಬಂತು. ಯಡಿಯೂರಪ್ಪ ಜತೆ ನಡೆಸಿದ ಸಮಾಲೋಚನೆ ಬಗ್ಗೆ ರಾಜಣ್ಣ ಅವರು ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು.