ಹಾವೇರಿ (ಸೆ. 01): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರವಾಹ ಪೀಡಿತ ಹಾವೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶನಿವಾರ ಪರಿಶೀಲನೆ ನಡೆಸಿ, ಸಂತ್ರಸ್ತರ ಸಮಸ್ಯೆಗಳಿಗೆ ಕಿವಿಯಾದರು.

ಪೂರ್ವ ನಿಗದಿಯಂತೆ ಯಡಿಯೂರಪ್ಪ ಅವರು ಮೊದಲಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನರೆ ಪರಿಶೀಲನೆ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಸಿಎಂ, ಬಳಿಕ ಮಾರ್ಗವಾಗಿ ಕಾರವಾರಕ್ಕೆ ತೆರಳಬೇಕಿತ್ತು. ಆದರೆ, ಮಳೆಯಿಂದಾಗಿ ಉ.ಕ. ಪ್ರವಾಸ ರದ್ದುಗೊಳಿಸಿದ ಮುಖ್ಯಮಂತ್ರಿಗಳು ಶಿವಮೊಗ್ಗದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಿಎಂ ಭೇಟಿ ನೀಡದ ಸ್ಥಳಕ್ಕೆ ಸಿದ್ದು!, ಸಂತ್ರಸ್ತರ ಸಮಸ್ಯೆ ಆಲಿಕೆ

ಮಧ್ಯಾಹ್ನದ ಬಳಿಕ ಹಾವೇರಿ ತೆರಳಿದ ಯಡಿಯೂರಪ್ಪ, ಅಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ನೆರೆ ಪರಿಶೀಲನೆ ಬಳಿಕ ಹಾವೇರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ನೆರೆ ಹಾಗೂ ಅತಿವೃಷ್ಟಿಹಾನಿ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದರು.

ಅನುದಾನ ಸಂತ್ರಸ್ತರಿಗೆ:

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿಯಾದರೂ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಆರ್ಥಿಕ ಸ್ಥಿತಿ ಏನೇ ಇದ್ದರೂ ನೆರೆ ಸಂತ್ರಸ್ತರಿಗೆ ಸ್ಪಂದಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದೆ. ಕೇಂದ್ರದಿಂದ ಶೀಘ್ರ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿದ್ದೇವೆ ಎಂದರು.

ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ವಿತರಿಸಲು ಈಗಾಗಲೇ ಕೇಂದ್ರ ಅಧ್ಯಯನ ತಂಡ ಬಂದು ಪರಿಶೀಲನೆ ಮಾಡಿ ಹೋಗಿದೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈಗಾಗಲೇ ತಕ್ಷಣದ ಪರಿಹಾರವಾಗಿ 10 ಸಾವಿರ ರು. ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಶೆಡ್‌ ನಿರ್ಮಿಸಿಕೊಡಲಾಗುತ್ತಿದೆ. ಆದಷ್ಟುಬೇಗ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ನೆಲೆ ಕಲ್ಪಿಸಲಾಗುವುದು. ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಯುತ್ತಿದ್ದು, ಸಮಗ್ರ ವರದಿ ಬಂದ ಬಳಿಕ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಪ್ರವಾಹ ಸಂತ್ರಸ್ತರಿಗೆ ಆರೋಗ್ಯ ಇಲಾಖೆಯಿಂದ ಮಾನಸಿಕ ಚಿಕಿತ್ಸೆ ಕಾರ್ಯಕ್ರಮ

15 ನಿಮಿಷದಲ್ಲಿ ಮುಗಿದ ಸಭೆ

ನೆರೆ ಪೀಡಿತ ಪ್ರದೇಶಕ್ಕೆ ತರಾತುರಿಯಲ್ಲೇ ಹೋಗಿ ಬಂದ ಸಿಎಂ ಯಡಿಯೂರಪ್ಪ ಅವರು ಕೇವಲ 15 ನಿಮಿಷಗಳಲ್ಲಿ ನೆರೆ ಪರಿಹಾರ ಪ್ರಗತಿ ಪರಿಶೀಲನೆ ಮುಗಿಸಿದರು. ಸಭೆಯ ಆರಂಭದಲ್ಲಿ ಸಚಿವ ಬೊಮ್ಮಾಯಿ, ಜಿಲ್ಲಾಧಿಕಾರಿಗಳು ನೆರೆ ಹಾನಿ ಕುರಿತು ಸಂಕ್ಷಿಪ್ತವಾಗಿ ವಿವರ ನೀಡಿದರು. ಬಳಿಕ ಮನೆ, ಬೆಳೆ ಹಾನಿ ಬಗ್ಗೆ ಯಾವ ಅಧಿಕಾರಿಗಳಿಂದಲೂ ಹೆಚ್ಚಿನ ಮಾಹಿತಿ ಪಡೆಯದ ಸಿಎಂ, ಬೆಂಗಳೂರಿನಲ್ಲಿ 6 ಗಂಟೆಗೆ ಸಭೆಯಿದೆ ಎಂದು ಹೇಳುತ್ತ ಸಭೆ ಮುಗಿಸಿದರು. ಗೃಹ ಸಚಿವ ಬಸವರಾಜ್‌ ಬೊಮ್ಮಯಿ ಅವರನ್ನು ಹಾವೇರಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೆಂದು ಇದೇ ವೇಳೆ ಯಡಿಯೂರಪ್ಪ ಘೋಷಿಸಿದರು.