ಬೆಂಗಳೂರು (ಆ. 31): ತೀವ್ರ ಪ್ರವಾಹದಿಂದಾಗಿ ಸೂರು, ಸಂಬಂಧಿಕರು, ಜಾನುವಾರು ಹಾಗೂ ಆಸ್ತಿ-ಪಾಸ್ತಿ ಕಳೆದುಕೊಂಡು ಅತಂತ್ರರಾಗಿರುವ ಸಂತ್ರಸ್ತರಿಗೆ ಮಾನಸಿಕವಾಗಿ ಸ್ಥೈರ್ಯ ತುಂಬಲು ಆರೋಗ್ಯ ಇಲಾಖೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಿಬ್ಬಂದಿ, ಜಿಲ್ಲಾ ವೈದ್ಯಕೀಯ ಕಾಲೇಜಿನ ಮಾನಸಿಕ ಆರೋಗ್ಯ ತಂಡ ಹಾಗೂ ನಿಮ್ಹಾನ್ಸ್‌ ಸಹಯೋಗದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೋ ಸಾಮಾಜಿಕ ಆರೈಕೆ ಬಗ್ಗೆ ತರಬೇತಿ ನೀಡಿ ಸಂತ್ರಸ್ತರಿಗೆ ಮಾನಸಿಕ ಸಮತೋಲನಕ್ಕಾಗಿ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾರೆ.

ಮೊದಲ ಹಂತದಲ್ಲಿ ಕೊಡಗು, ಬೆಳಗಾವಿ, ಬಾಗಲಕೋಟೆ, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಾಮರಾಜನಗರ ಜಿಲ್ಲೆಗಳಲ್ಲಿ ಮಾನಸಿಕ ಪ್ರಥಮ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. 3,499 ಮಂದಿಗೆ ಗುಂಪು ಸಮಾಲೋಚನೆ, 2715 ಮಂದಿಗೆ ನೇರಾ-ನೇರ ಆಪ್ತ ಸಮಾಲೋಚನೆ ನಡೆಸಲಾಗಿದೆ.

ಈ ವೇಳೆ 707 ಮಾನಸಿಕ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ. ಜತೆಗೆ ಸಾಮರ್ಥ್ಯ ಹಾಗೂ ಮಾನಸಿಕ ವೃದ್ಧಿ ಕಾರ್ಯಾಗಾರ ನಡೆಸಿದ್ದು, ಪರಿಹಾರ ಶಿಬಿರ ಮತ್ತು ನೆರೆ ಪೀಡಿತ ಪ್ರದೇಶಗಳ ಸ್ಥಿತಿಗತಿ ಅವಲೋಕನ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಮ್ಹಾನ್ಸ್‌ ಕುಲಸಚಿವ ಡಾ.ಕೆ. ಶೇಖರ್‌, ನಿಮ್ಹಾನ್ಸ್‌ ಸಂಸ್ಥೆಯಿಂದಲೂ ನೆರೆ ಸಂತ್ರಸ್ತರಿಗೆ ಮಾನಸಿಕ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿದೆ. ನೆರೆಯಿಂದ ಸೃಷ್ಟಿಯಾದ ಸುತ್ತಮುತ್ತಲಿನ ವಾತಾವರಣ ಸಂತ್ರಸ್ತರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ನೆರೆ ಹೊರೆಯವರ ಜತೆ ನೋವು ಹಂಚಿಕೊಳ್ಳುವ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.