ಮುಂದಿನ  ವಿಧಾಸಭೆ ಚುನಾವಣೆಗೆ ಕೆಲವೇ ಕೆಲವು  ತಿಂಗಳುಗಳಷ್ಟೇ ಬಾಕಿ ಇದೆ. ಶತಾಯಗತಾಯ ಪಕ್ಷವನ್ನು  ಗೆಲ್ಲಿಸಲೇ ಬೇಕು ಅನ್ನೋ ಹಠಕ್ಕೆ ಬಿಜೆಪಿ ಬಿದ್ದಿದ್ದು , ಅಮಿತ್​ ಶಾ ನೇತೃತ್ವದಲ್ಲಿ  ಕಾರ್ಯತಂತ್ರ ರೂಪಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ  ಸಿಎಂ ಸಿದ್ದರಾಮಯ್ಯ ಸಹ  ಪ್ಲಾನ್​'ವೊಂದನ್ನು  ಮಾಡಿದ್ದು  ಮಹದಾಯಿ, ಕಾವೇರಿ  ವಿಚಾರವನ್ನು  ಮುಂದಿಟ್ಟುಕೊಂಡು ಬಿಜೆಪಿ ಕಾರ್ಯತಂತ್ರವನ್ನು  ವಿಫಲಗೊಳಿಸಲು ಮುಂದಾಗಿದ್ದಾರೆ. 

ಬೆಂಗಳೂರು(ಆ.14): ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ತಂತ್ರವನ್ನು ಸರಿಯಾದ ಸಮಯದಲ್ಲೇ ಪ್ರಯೋಗಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್​ ವಿರುದ್ಧ ರಣತಂತ್ರ ಹೆಣೆಯಲು ಮಾಸ್ಟರ್​ ಪ್ಲಾನ್​ ಮಾಡುತ್ತಿದ್ದರೆ , ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯಕ್ಕೆ ಸಿಎಂ ಮುಂದಾಗಿದ್ದಾರೆ.

ಒಂದ್ಕಡೆ ರಾಜ್ಯಪ್ರವಾಸದಲ್ಲಿರುವ ಅಮಿತ್​ ಶಾ , ಆಡಳಿತ ಪಕ್ಷ ಕಾಂಗ್ರೆಸ್​ ಹತ್ತಿಕ್ಕಲು ಕಾರ್ಯತಂತ್ರ ರೂಪಿಸುವಂತೆ ರಾಜ್ಯನಾಯಕರಿಗೆ ಕ್ಲಾಸ್​ ತೆಗೆದುಕೊಳ್ಳುತ್ತಿದ್ದರೆ , ಈ ಪ್ಲಾನ್ ನ​ನ್ನು ವಿಫಲಗೊಳಿಸಲು ಸಿಎಂ ಸಿದ್ದರಾಮಯ್ಯ ಮಹದಾಯಿ, ಕಾವೇರಿ ವಿಚಾರವನ್ನು ಅಸ್ತ್ರವಾಗಿ ಬಳಸಿಕೊಂಡು ಇಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಸಿಎಂ ಅವರ ಈ ಸಭೆಯಲ್ಲಿ ಭಾಗಿಯಾಗಬೇಕೋ ಇಲ್ಲ ಅಮಿತ್​ ಶಾ ಅವರ ರಾಜ್ಯ ಪ್ರವಾಸದಲ್ಲಿ ತೊಡಗಿಕೊಳ್ಳಬೇಕೋ ಅನ್ನೋ ಗೊಂದಲದಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದಾರೆ. ಒಂದು ವೇಳೆ ಮಹದಾಯಿ, ಕಾವೇರಿ ವಿಚಾರವಾಗಿ ಸರ್ವಪಕ್ಷ ಸಭೆಗೆ ಗೈರಾದರೆ , ರಾಜ್ಯದ ಜನರ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತೆ. ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗದ ಮತಗಳು ಕೈತಪ್ಪುವ ಭೀತಿ ಬಿಜೆಪಿ ನಾಯಕರಿಗಿದೆ.

ಇವತ್ತಿನ ಸರ್ವಪಕ್ಷ ಸಭೆಗೆ ಪಾಲ್ಗೊಳ್ಳಿ: ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್​ ಶಾ ಸೂಚನೆ

ಇನ್ನು ಸಿಎಂ ಕರೆದಿರುವ ಸರ್ವ ಪಕ್ಷ ಸಭೆ ವಿಚಾರವನ್ನು ರಾಜ್ಯ ಬಿಜೆಪಿ ನಾಯಕರು ಈಗಾಗಲೇ ಅಮಿತ್​ ಶಾ ಗಮನಕ್ಕೆ ತಂದಿದ್ದಾರೆ. ಸಿಎಂ ಸಭೆಗೆ ಗೈರಾದರೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇವತ್ತು ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗದೆ. ಅಮಿತಾ ಶಾ ಅವರ ಮೆಚ್ಚುಗೆಗೆ ಪಾತ್ರವಾಗಬೇಕೋ ಇಲ್ಲ ರಾಜ್ಯದ ಜನರ ಹಿತವನ್ನು ಕಾಪಾಡಬೇಕೋ ಅನ್ನೋ ಗೊಂದಲದಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಸಿಎಂ ಸಿಲುಕಿಸಿದ್ದು ಸರ್ವಪಕ್ಷ ಸಭೆ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ.