ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಗೆಲ್ಲಲ್ಲ ಅಂತ ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಲು ಅವರೇನು ಎರಡು ಲಕ್ಷ ಮತದಾರರನ್ನ ಜೇಬಲ್ಲಿ ಇಟ್ಟುಕೊಂಡಿದ್ದಾರಾ? ಎಂದು  ಸಿಎಂ ಸಿದ್ದರಾಮಯ್ಯ ಎಚ್'ಡಿಕೆಯನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು (ಅ.26): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಗೆಲ್ಲಲ್ಲ ಅಂತ ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಲು ಅವರೇನು ಎರಡು ಲಕ್ಷ ಮತದಾರರನ್ನ ಜೇಬಲ್ಲಿ ಇಟ್ಟುಕೊಂಡಿದ್ದಾರಾ? ಎಂದು ಸಿಎಂ ಸಿದ್ದರಾಮಯ್ಯ ಎಚ್'ಡಿಕೆಯನ್ನು ಪ್ರಶ್ನಿಸಿದ್ದಾರೆ.

ಇಂದು ಸುದ್ದಿಗೋಷ್ಟಿ ನಡೆಸಿದ ಸಿಎಂ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಅಂತ ತೀರ್ಮಾನ ಮಾಡೋದು ಜನರೇ ವಿನಃ ಕುಮಾರಸ್ವಾಮಿ ಅಲ್ಲ. ನನ್ನ ವೈರಿಗಳೆಲ್ಲ ಒಟ್ಟಾದರೂ ಕೂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನೇ ಗೆಲ್ಲೋದು. ಜನ ನನ್ನನ್ನ ಗೆಲ್ಲಿಸುತ್ತಾರೆ ಅಂತ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

 ಇದೇ ವೇಳೆ ರಾಜ್ಯದಲ್ಲಿ ವಸತಿ ಅನುಷ್ಠಾನ ಕುರಿತು ಸಭೆ ನಡೆಸಿದ ವಿವರ ನೀಡಿದ ಸಿಎಂ, ಬೆಂಗಳೂರು ನಗರದಲ್ಲಿ ಬಡವರಿಗೆ ಒಂದು ಲಕ್ಷ ಮನೆಗಳ ನಿರ್ಮಾಣ ಮಾಡೋದಾಗಿ ಈ ವರ್ಷದ ಬಜೆಟ್ ನಲ್ಲಿ ಹೇಳಿದ್ದೆವು. ಅದಕ್ಕೆ ಒಂದು ಸಾವಿರ ಎಕರೆ ಜಮೀನು ಬೇಕಿದೆ. ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಅವರಿಗೆ ಹೇಳಿದ್ದೇನೆ 1,100 ಎಕರೆ ಜಮೀನು ಕೊಡಬೇಕು ಅಂತ ಸೂಚಿಸಿರೋದಾಗಿ ಸಿಎಂ ಹೇಳಿದರು. ಬಡತನ ರೇಖೆಗಿಂತ ಕೆಳಗಿರುವವರು ಹಾಗೂ 5 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವವರಿಗೆ ಮನೆ ನೀಡೋದಾಗಿಯೂ ಸಿಎಂ ಹೇಳಿದರು.

ಇದೇ ವೇಳೆ ಗುಜರಾತ್​ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಮೋದಿಯವರಿಗೆ ಅನುಕೂಲ ಮಾಡಿಕೊಡಲು ಈಗ ಫಿಕ್ಸ್ ಮಾಡಿದ್ದಾರೆ ಅಂತ ಆರೋಪಿಸಿದರು. ಗುಜರಾತ್​ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ ಸಿಎಂ, ನಮ್ಮ ರಾಜ್ಯದಲ್ಲಿ ನನ್ನ ನೇತೃತ್ವದಲ್ಲೇ ಚುನಾವಣೆ ಎದುರಿಸಲಿದ್ದೇವೆ ಎಂದರು.