ಪ್ರಧಾನಿ ಮೋದಿ ಐಟಿ ದಾಳಿ ಅಸ್ತ್ರಕ್ಕೆ ಸಿಎಂ ಸಿದ್ದರಾಮಯ್ಯ ಎಸಿಬಿಯನ್ನು ಪ್ರತ್ಯಸ್ತ್ರವಾಗಿ ಪ್ರಯೋಗಿಸಲಿದ್ದಾರೆ.  ಎಸಿಬಿ ಮತ್ತು ಲೋಕಾಯುಕ್ತದಲ್ಲಿರುವ ಬಿಜೆಪಿ ನಾಯಕರ ಕೇಸ್​ಗಳಿಗೆ ಮರುಜೀವ ನೀಡಲು ಸಿಎಂ ಸೂಚನೆ ನೀಡಿದ್ದಾರೆ.  

ಬೆಂಗಳೂರು (ಆ.03):  ಪ್ರಧಾನಿ ಮೋದಿ ಐಟಿ ದಾಳಿ ಅಸ್ತ್ರಕ್ಕೆ ಸಿಎಂ ಸಿದ್ದರಾಮಯ್ಯ ಎಸಿಬಿಯನ್ನು ಪ್ರತ್ಯಸ್ತ್ರವಾಗಿ ಪ್ರಯೋಗಿಸಲಿದ್ದಾರೆ. ಎಸಿಬಿ ಮತ್ತು ಲೋಕಾಯುಕ್ತದಲ್ಲಿರುವ ಬಿಜೆಪಿ ನಾಯಕರ ಕೇಸ್​ಗಳಿಗೆ ಮರುಜೀವ ನೀಡಲು ಸಿಎಂ ಸೂಚನೆ ನೀಡಿದ್ದಾರೆ.

ಮೂಗರ್ಜಿ ಸೇರಿದಂತೆ ರಾಜ್ಯ ಬಿಜೆಪಿಯ 17 ನಾಯಕರ ವಿರುದ್ಧ ಪ್ರಮುಖ ದೂರುಗಳು ದಾಖಲಾಗಿವೆ. ರಾಜ್ಯ ಬಿಜೆಪಿ ನಾಯಕರ ವಿರುದ್ಧ ಈವರೆಗೆ ಬಂದಿರುವ ದೂರುಗಳ ಪರಿಶೀಲನೆಗೆ ಸೂಚಿಸಿದ್ದಾರೆ.

ಬಿಎಸ್​ವೈ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಆರ್.ಅಶೋಕ್, ಪಿ.ಸಿ. ಮೋಹನ್ ಕಟ್ಟಾಸುಬ್ರಮಣ್ಯ ನಾಯ್ಡು, ಜನಾರ್ದನ್ ರೆಡ್ಡಿ, ರಾಮುಲು ಸೇರಿದಂತೆ ಪ್ರಮುಖರ ಮೇಲೆ ಲೋಕಾಯುಕ್ತ ಹಾಗೂ ಎಸಿಬಿಯಲ್ಲಿ ಕೇಸ್ ದಾಖಲಾಗಿವೆ. ಅಕ್ರಮ ಆಸ್ತಿಗಳಿಕೆ ಆರೋಪದ ದೂರುಗಳಿವೆ.

ಹಳೇ ಕೇಸ್​ಗಳಿಗೆ ಮರು ಜೀವ!

ದಾಖಲಾಗಿರೋ ದೂರುಗಳ ಬಗ್ಗೆ ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆಯುತ್ತಿದ್ದಾರೆ. ದಾಖಲಾಗಿರುವ ಯಾವುದಾದರೂ ಕೇಸ್ ಗಳಲ್ಲಿ ತನಿಖೆ ನಡೆಯುತ್ತಿದೆಯೇ..? ಹೊಸದಾಗಿ ವಿಚಾರಣೆ ನಡೆಸಬಹುದೇ ಎಂದು ವಿವರ ಪಡೆಯುತ್ತಿದ್ದಾರೆ.

ಬಿಎಸ್​ವೈ-ಅನಂತಕುಮಾರ್ ಸಂಭಾಷಣೆ ಕೇಸ್

ಬಿ.ಎಸ್‌.ವೈ ಮತ್ತು ಕೇಂದ್ರ ಸಚಿವ ಅನಂತ ಕುಮಾರ್‌ ನಡುವಿನ ಸಂಭಾಷಣೆ ಬಗ್ಗೆ ಕೆಪಿಸಿಸಿ ಕಾನೂನು ಘಟಕವು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿತ್ತು. ಸಂಭಾಷಣೆಯ ಪ್ರಕಾರ ಲಂಚರೂಪದಲ್ಲಿ ಹೈಕಮಾಂಡ್‌ಗೆ ಹಣ ನೀಡಿರುವ ಆರೋಪ ಮಾಡಲಾಗಿದೆ. 2017ರ ಫೆಬ್ರವರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಾಗಿದೆ.

ಬಿಎಸ್​ವೈಗೆ ಮತ್ತೆ ‘ಭೂ’ ಕಂಟಕ!

ಟ್ರಸ್ಟ್ ಹೆಸರಿನಲ್ಲಿ ಸರ್ಕಾರಿ ಭೂಮಿ ಕಬಳಿಕೆ ಮಾಡಿದ ಆರೋಪದಡಿ ಬಿಎಸ್​ವೈ, ಬಿಜೆ ಪುಟ್ಟಸ್ವಾಮಿ, ಹಿಂದಿನ ಜಿಲ್ಲಾಧಿಕಾರಿ ಅಯ್ಯಪ್ಪ ವಿರುದ್ಧದ ದೂರು ದಾಖಲಾಗಿದೆ.

ಆರ್'ಟಿಐ ಕಾರ್ಯಕರ್ತ ಹನುಮೇಗೌಡ ಎಸಿಬಿಗೆ ಏಪ್ರಿಲ್ 27 , 2016 ರಂದು ದೂರು ನೀಡಿದ್ದರು. ನೋಂದಣಿಯಾದ 6 ತಿಂಗಳಲ್ಲೇ ವಿಶ್ವ ಗಾಣಿಗ ಟ್ರಸ್ಟ್​ಗೆ 10 ಎಕರೆ ಗೋಮಾಳ ಮಂಜೂರಾಗಿದೆ.

ಬೆಂಗಳೂರಿನ ಹೊರವಲಯದ ಟಿ ದಾಸನಪುರದಲ್ಲಿನ 10 ಎಕರೆ ಗೋಮಾಳ ಕೋಟಿ ಮೌಲ್ಯವನ್ನು ಹೊಂದಿದೆ.