Asianet Suvarna News Asianet Suvarna News

ಮಹದಾಯಿ ಚರ್ಚೆಗೆ ಮನೋಹರ್ ಪರ್ರಿಕರ್, ದೇವೆಂದ್ರ ಫಡ್ನವೀಸ್'ಗೆ ಸಿಎಂ ಆಹ್ವಾನ

ಮಹದಾಯಿ ನ್ಯಾಯಮಂಡಳಿ ಸಲಹೆಯಂತೆ ಮಹದಾಯಿ ನದಿ ನೀರಿನ ವಿವಾದವನ್ನು ನ್ಯಾಯಮಂಡಳಿಯ ಹೊರಗೆ ಮಾತುಕತೆ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ತೋರಿದ್ದು, ಈ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಆಹ್ವಾನ ನೀಡಿ, ಪತ್ರ ಬರೆದಿದ್ದಾರೆ.

CM Siddharamaiah Invites manohar Parrikar And Devendra Fadnavis for discuss about Mahadayi Issue
ಬೆಂಗಳೂರು (ಮೇ.26):  ಮಹದಾಯಿ ನ್ಯಾಯಮಂಡಳಿ ಸಲಹೆಯಂತೆ ಮಹದಾಯಿ ನದಿ ನೀರಿನ ವಿವಾದವನ್ನು ನ್ಯಾಯಮಂಡಳಿಯ ಹೊರಗೆ ಮಾತುಕತೆ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ತೋರಿದ್ದು, ಈ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಆಹ್ವಾನ ನೀಡಿ, ಪತ್ರ ಬರೆದಿದ್ದಾರೆ.
 
ಮಹದಾಯಿ ಅಂತಾರಾಜ್ಯ ನದಿ ನೀರಿನ ವಿವಾದವನ್ನು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ನ್ಯಾಯಮಂಡಳಿ ಸಲಹೆ ನೀಡಿದೆ. ಈ ಸಲಹೆಯನ್ನು ನ್ಯಾಯಮಂಡಳಿ ಎದುರು ಗೋವಾ ಪರ ಹಾಜರಾದ ವಕೀಲರೂ ಕೂಡ ಸ್ವಾಗತಿಸಿದ್ದರು. ನ್ಯಾಯಮಂಡಳಿಯ ಸಲಹೆ ಹಿನ್ನೆಲೆಯಲ್ಲಿ ಕಳೆದ ೨೦೧೬ರ ಅಕ್ಟೋಬರ್ ೨೧ರಂದು ತ್ರಿವಳಿ ರಾಜ್ಯಗಳ ಸಿಎಂಗಳ ಸಭೆಯನ್ನು ಮುಂಬೈನಲ್ಲಿ ಕರೆಯಲಾಗಿತ್ತು. ಆದರೆ ಗೋವಾದ ಈ ಹಿಂದಿನ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರು ಸಭೆಗೆ ಹಾಜರಾಗದ ಕಾರಣ ಸಭೆಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿತ್ತು. ಹೀಗಾಗಿ ಮುಂದೂಡಿದ ಸಭೆಯನ್ನು ಜೂನ್ ತಿಂಗಳಿನಲ್ಲಿ ತಮಗೆ ಅನುಕೂಲವಾಗುವ ದಿನದಂದು ಬೆಂಗಳೂರಿನಲ್ಲಿ ನಡೆಸಲು ಕರ್ನಾಟಕ ರಾಜ್ಯ ಉತ್ಸುಕವಾಗಿದೆ. ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿದೆ. ಹೀಗಾಗಿ ತಾವು ಮಾತುಕತೆಯಲ್ಲಿ ಪಾಲ್ಗೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಅವರು ಪರಿಕ್ಕರ್ ಅವರಿಗೆ ಬುಧವಾರ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
 
ಸಭೆಯ ದಿನಾಂಕ ನಿಗದಿ, ಸಭೆಯ ಅಜೆಂಡಾ ಹಾಗೂ ಮತ್ತಿತರ ಸಿದ್ಧತೆಗಳ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಅವರು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

 

Follow Us:
Download App:
  • android
  • ios