ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ವರುಣಾ ಕ್ಷೇತ್ರ ತೊರೆದು ಹೈದರಾಬಾದ್‌ ಕರ್ನಾಟಕದ ಕೊಪ್ಪಳದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಗೆ ಈಗ ಇನ್ನಷ್ಟುರೆಕ್ಕೆಪುಕ್ಕ ಬರುತ್ತಿದೆ. ಸ್ವತಃ ಸಿದ್ದರಾಮಯ್ಯ ಅವರೇ ಈಗ ಕೊಪ್ಪಳದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಮೇ.19): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ವರುಣಾ ಕ್ಷೇತ್ರ ತೊರೆದು ಹೈದರಾಬಾದ್ ಕರ್ನಾಟಕದ ಕೊಪ್ಪಳದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಗೆ ಈಗ ಇನ್ನಷ್ಟುರೆಕ್ಕೆಪುಕ್ಕ ಬರುತ್ತಿದೆ. ಸ್ವತಃ ಸಿದ್ದರಾಮಯ್ಯ ಅವರೇ ಈಗ ಕೊಪ್ಪಳದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸಿದ್ದರಾಮಯ್ಯ ಅವರು ತಾವು ಸ್ಪರ್ಧಿಸಲು ಎರಡು ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಅವು ತಮ್ಮ ಹಳೆಯ ಕ್ಷೇತ್ರವಾದ ಚಾಮುಂಡೇಶ್ವರಿ ಹಾಗೂ ಕೊಪ್ಪಳ. ಚಾಮುಂಡೇಶ್ವರಿ ಸಿಎಂ ಅವರ ಹಳೆಯ ಕ್ಷೇತ್ರವಾದರೂ ಜಾತಿ ಲೆಕ್ಕಾಚಾರ ಅಲ್ಲಿ ಸಂಪೂರ್ಣ ಸರಿ ಹೊಂದುವುದಿಲ್ಲ. ಹೀಗಾಗಿ ಸ್ವಜಾತಿಯ ಮತದಾರರು ಹೆಚ್ಚಿರುವ ಕೊಪ್ಪಳ ಕ್ಷೇತ್ರದ ಸುರಕ್ಷಿತ ಎಂದು ಆಪ್ತರು ಸಿಎಂ ಸಿದ್ದರಾಮಯ್ಯ ಅವರ ಮನವೊ ಲಿಸುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಈ ಎರಡು ಕ್ಷೇತ್ರಗಳ ಮೇಲೆ ಸಿಎಂ ಕಣ್ಣಿದೆ.
ರಾಯರಡ್ಡಿ ಬೆಂಬಲ: ಮುಖ್ಯಮಂತ್ರಿ ವ್ಯಕ್ತಪಡಿಸಿದ ಈ ಇಂಗಿತಕ್ಕೆ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರಿಂದಲೂ ಬೆಂಬಲ ಸಿಕ್ಕಿದೆ. ಈ ವಿಚಾರವಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕೊಪ್ಪಳದಿಂದ ಸ್ಪರ್ಧಿಸುವುದಾದರೆ ಅದಕ್ಕೆ ನಮ್ಮ ಸ್ವಾಗತ ಇದೆ. ಒಂದು ವೇಳೆ ಅವರು ಕೊಪ್ಪಳದಿಂದ ಸ್ಪರ್ಧಿಸಿದರೆ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಗಂಗಾವತಿ ಅಥವಾ ಕುಷ್ಟಗಿಯಿಂದ ಕಣಕ್ಕೆ ಇಳಿಸಲಾಗುವುದು ಎಂದರು. ಇದಕ್ಕೆ ರಾಯರಡ್ಡಿ ಅವರ ಜತೆಗೇ ಇದ್ದ ಹಿಟ್ನಾಳ ಕೂಡ ಒಪ್ಪಿಗೆ ಸೂಚಿಸಿದರು. ಕೊಪ್ಪಳ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಹೊಸದೇನಲ್ಲ. ಕುರುಬರು ಬಹುಸಂಖ್ಯಾತರಿರುವ ಈ ಕ್ಷೇತ್ರದಿಂದ 1991ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು.
