ಮಾದರಿ ಆಗಿದ್ದ ಗುಜರಾತ್‌ ಈಗ 11ನೇ ಸ್ಥಾನಕ್ಕೆ!

CM Siddaramaiah Slams PM Modi
Highlights

ರಾಜ್ಯಕ್ಕೆ ಬಂದ ಪ್ರಧಾನ ಮಂತ್ರಿಯವರು ಮಹದಾಯಿ, ರೈತಸಾಲಮನ್ನಾಗಳ ಬಗ್ಗೆ ಪ್ರಸ್ತಾಪಿಸಬಹುದೆಂದು ಅಂದುಕೊಂಡಿದ್ದೆ. ಆದರೆ, ಅವನ್ನು ಬಿಟ್ಟು ದಾಖಲೆ ಇಲ್ಲದೆ ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಹೋಗಿದ್ದಾರೆ. ಹೀಗೆ ಆರೋಪ ಮಾಡುವ ಪ್ರಧಾನಿ ಮೋದಿ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಲೋಕಪಾಲ ಮಸೂದೆಯನ್ನು ಯಾಕೆ ಜಾರಿಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರು : ರಾಜ್ಯಕ್ಕೆ ಬಂದ ಪ್ರಧಾನ ಮಂತ್ರಿಯವರು ಮಹದಾಯಿ, ರೈತಸಾಲಮನ್ನಾಗಳ ಬಗ್ಗೆ ಪ್ರಸ್ತಾಪಿಸಬಹುದೆಂದು ಅಂದುಕೊಂಡಿದ್ದೆ. ಆದರೆ, ಅವನ್ನು ಬಿಟ್ಟು ದಾಖಲೆ ಇಲ್ಲದೆ ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಹೋಗಿದ್ದಾರೆ. ಹೀಗೆ ಆರೋಪ ಮಾಡುವ ಪ್ರಧಾನಿ ಮೋದಿ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಲೋಕಪಾಲ ಮಸೂದೆಯನ್ನು ಯಾಕೆ ಜಾರಿಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳೇ ಆಗಿಲ್ಲ ಎಂದು ಹೇಳುವ ನರೇಂದ್ರ ಮೋದಿ ಅವರು ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿಯೇ ಯಾಕೆ ಆಯೋಜಿಸಿದ್ದರು ಎಂದು ಪ್ರಶ್ನಿಸಿದರು.

ಈಗ ಕರ್ನಾಟಕವೇ ನಂ.1: ರಾಜ್ಯ ಕಾಂಗ್ರೆಸ್‌ ಸರ್ಕಾರ ಶೇ.10ರಷ್ಟುಕಮಿಷನ್‌ ಸರ್ಕಾರವೆಂದು ಪ್ರಧಾನಿ ಮೋದಿ ಆರೋಪಿಸಿದ್ದು, ಅವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಗುಜರಾತ್‌ ಮಾದರಿ ರಾಜ್ಯ ಅಭಿವೃದ್ಧಿಯಲ್ಲಿ ದೇಶದಲ್ಲಿಯೇ ನಂ.1 ಎಂದು ಮೋದಿ ಹೇಳುತ್ತಿದ್ದರು. ಆಗ 11ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ ಅಭಿವೃದ್ಧಿಯಲ್ಲಿ ನಂ.1 ಸ್ಥಾನಕ್ಕೇರಿದೆ. ಅಭಿವೃದ್ಧಿ ವಿಷಯದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿ ರಾಜ್ಯವಾಗಿದೆ ಎಂದರು.

ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎನ್ನುವ ಕೇಂದ್ರ ಸರ್ಕಾರ, ನೀರವ್‌ ಮೋದಿ, ವಿಜಯ ಮಲ್ಯ ಹಣ ಲೂಟಿ ಹೊಡೆದು ದೇಶ ಬಿಟ್ಟು ಹೋದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಏನನ್ನು ಸೂಚಿಸುತ್ತದೆ? ಇಂತಹ ಹಗರಣಗಳು ಬಯಲಾದಾಗಲೆಲ್ಲಾ ಮೋದಿ ಮೌನ ವಹಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಜೈಲಿಗೆ ಹೋಗಿದ್ದ ಶಾ: ಇದೇ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನೂ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು, ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು ಬೇಲ್‌ನಲ್ಲಿ ಹೊರಗಡೆ ಇದ್ದ ಅಮಿತ್‌ ಶಾ ಗಡಿಪಾರೂ ಆಗಿದ್ದರು. ಇಂಥವರು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ತಮ್ಮ ಪಕ್ಕದಲ್ಲಿ ಕುಳಿತುಕೊಳ್ಳುವ ಬಿ.ಎಸ್‌.ಯಡಿಯೂರಪ್ಪ ಮತ್ತು ಜೈಲಿಗೆ ಹೋಗಿ ಬಂದ ಮುಖಂಡರನ್ನು ನೋಡಿ ಆರೋಪಿಸಲಿ ಎಂದು ಹೇಳಿದರು.

ರಾಜ್ಯದ ಸಾಮಾನ್ಯ ಜನರಿಗೆ, ರೈತರಿಗೆ, ಕೈಗಾರಿಕಾ ವಲಯಗಳಿಗೆ ವಿದ್ಯುತ್‌ ಸಮಸ್ಯೆಯಾಗದಂತೆ ರಾಜ್ಯ ಸರ್ಕಾರ ನೋಡಿಕೊಂಡಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ 8 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ಮನೆಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ದೇಶ ಶೇ.88 ರಷ್ಟುಸಾಧನೆ ಮಾಡಿದ್ದು ಕರ್ನಾಟಕದಲ್ಲಿ ಶೇ.98ರಷ್ಟುಮನೆಗಳಿಗೆ ವಿದ್ಯುತ್‌ ಪೂರೈಸಲಾಗುತ್ತಿದೆ.

loader