ಸಂಪುಟ ವಿಸ್ತರಣೆ ಕಸರತ್ತು ದೆಹಲಿ ಅಂಗಳ ತಲುಪಿದೆ. ಸಿದ್ದರಾಮಯ್ಯ ಇಂದು ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ ಮಾಡಲಿದ್ದಾರೆ. ಇತ್ತ ಸಚಿವಾಕಾಂಕ್ಷಿಗಳು ಕೂಡ ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಯಾರಿಗೆ ಮಂತ್ರಿಗಿರಿ ಒಲಿಯಲಿದೆ ಎಂಬುದು ಕುತೂಹಲ ಮೂಡಿದೆ.

ನವದೆಹಲಿ(ಆ.17): ಕೆಲ ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆ ಕಸರತ್ತು ಮತ್ತೇ ಬಿರುಸುಗೊಂಡಿದೆ. ಈ ವಿಚಾರ ಹೈಕಮಾಂಡ್ ಜೊತೆ ಚರ್ಚಿಸಲು ನಿನ್ನೆ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ದೆಹಲಿಗೆ ತೆರಳಿದ್ದಾರೆ. ವಿಸ್ತರಣೆಗೆ ದಿನಾಂಕ ನಿಗದಿ ಮಾಡುವುದು ಹಾಗೂ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಲಿದ್ದಾರೆ.

ದೆಹಲಿಯಲ್ಲೇ ಠಿಕಾಣಿ ಹೂಡಿದ ಮಂತ್ರಿಸ್ಥಾನದ ಆಕಾಂಕ್ಷಿಗಳು

ಸಂಪುಟ ವಿಸ್ತರಣೆ ಮುನ್ಸೂಚನೆ ಅರಿತ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಖಾಲಿ ಇರುವ ಮೂರು ಸ್ಥಾನಗಳಿಗೆ ಹೆಚ್ ಎಂ ರೇವಣ್ಣ, ಸಿ ಎಸ್ ಶಿವಳ್ಳಿ, ಸಿದ್ದು ನ್ಯಾಮಗೌಡ, ಷಡಕ್ಷರಿ, ಆರ್ ಬಿ ತಿಮ್ಮಾಪುರ, ರಾಜಶೇಖರ್ ಪಾಟೀಲ್ ಹುಮನಾಬಾದ್, ನರೇಂದ್ರಸ್ವಾಮಿ ದೆಹಲಿಯಲ್ಲಿ ಲಾಬಿ ನಡೆಸಿದ್ದಾರೆ. ಕೆಲವರು ಬೆಂಗಳೂರಲ್ಲಿದ್ದುಕೊಂಡೇ ಪ್ರಭಾವ ಬೀರುತ್ತಿದ್ದಾರೆ.

ಸಂಪುಟದಲ್ಲಿ ಮೂರು ಸಚಿವ ಸ್ಥಾನ ಖಾಲಿ

ಸದ್ಯ ಸಿದ್ದರಾಮಯ್ಯ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಇವೆ. ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣದ ಆರೋಪದಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಮಹದೇವಪ್ರಸಾದ್ ನಿಧನದಿಂದಾಗಿ ಒಂದು ಸ್ಥಾನ ಹಾಗೂ ಪರಮೇಶ್ವರ್ ರಾಜೀನಾಮೆಯಿಂದ ಮತ್ತೊಂದು ಸ್ಥಾನ ಖಾಲಿಯಾಗಿತ್ತು. ಈ ಮೂರು ಸ್ಥಾನಗಳನ್ನ ಸಿದ್ದರಾಮಯ್ಯ ಭರ್ತಿ ಮಾಡಬೇಕಿದೆ. ಚುನಾವಣೆ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಹುತ್ತಕ್ಕೆ ಕೈ ಹಾಕೋದು ದೊಡ್ಡ ಸವಾಲೇ ಸರಿ. ಯಾಕಂದ್ರೆ ಮಂತ್ರಿ ಸ್ಥಾನ ನೀಡಿದರೂ ಭಿನ್ನಮತ, ನೀಡದಿದ್ದರೂ ಭಿನ್ನಮತ ಸ್ಫೋಟಗೊಳ್ಳೋ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸಿದ್ದರಾಮಯ್ಯಗೆ ಸಂಪುಟ ವಿಸ್ತರಣೆ ಮಾಡೋದು ದೊಡ್ಡ ಚಾಲೆಂಜಾಗಿ ಪರಿಣಮಿಸಿದೆ. ಹೀಗಿದ್ದರೂ ಧೈರ್ಯ ಮಾಡಿ ವಿಸ್ತರಣೆಗೆ ಕೈ ಹಾಕಿದ್ದಾರೆ ಎನ್ನಲಾಗಿದೆ.

ಗೃಹ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ತಾರಾ ಸಿಎಂ ?

ಸಿದ್ದರಾಮಯ್ಯಗೆ ಗೃಹ ಖಾತೆಯನ್ನು ಯಾರಿಗೆ ನೀಡಬೇಕು ಅನ್ನೋದೇ ದೊಡ್ಡ ಸವಾಲಾಗಿದೆ. ಚುನಾವಣೆ ಸಂದರ್ಭದಲ್ಲಿ ಸೂಕ್ತರಿಗೆ ನೀಡಬೇಕೇ ಅಥವಾ ತಮ್ಮ ಬಳಿಯೇ ಇಟ್ಟುಕೊಳ್ಳ ಬೇಕೇ ಅನ್ನೋ ಗೊಂದಲಿದ್ದಾರೆ. ಹಾಲಿ ಸಚಿವರಾಗಿರುವ ರಮೇಶಕುಮಾರ್ ಅಥವಾ ರಾಮಲಿಂಗಾರೆಡ್ಡಿ ಇಲ್ಲವಾದಲ್ಲಿ ರಮಾನಾಥ್ ರೈಗೆ ನೀಡಬೇಕು ಅನ್ನೋ ಚಿಂತನೆ ಸಿದ್ದರಾಮಯ್ಯರದ್ದು.

ಯಾವ ಸಮುದಾಯದ ಮುಖಂಡರಿಂದ ಮೂರು ಸ್ಥಾನಗಳು ಖಾಲಿಯಾಗಿವೆಯೋ ಅದೇ ಸಮುದಾಯದ ಶಾಸಕರನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಇಚ್ಛೆಯೂ ಸಿಎಂದಾಗಿದೆ. ಹಾಗಾದಲ್ಲಿ ಭಿನ್ನಮತಕ್ಕೆ ಆಸ್ಪದ ಇಲ್ಲದಂತಾಗುತ್ತೆ ಅನ್ನೋದು ಸಿದ್ದರಾಮಯ್ಯ ತಂತ್ರವಾಗಿದೆ.