"ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ರಾಜೀನಾಮೆ ಪತ್ರ ಪಡೆದು ಹೊರಹೋಗು" ಎಂದು ಸಿದ್ದರಾಮಯ್ಯನವರೇ ಖುದ್ದಾಗಿ ಮೇಟಿಯವರ ರಾಜೀನಾಮೆ ಪಡೆದಿದ್ದಾರೆ.

ಬೆಂಗಳೂರು(ಡಿ. 14): ರಾಸಲೀಲೆ ನಡೆಸಿದ ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಅಬಕಾರಿ ಸಚಿವ ಹೆಚ್.ವೈ.ಮೇಟಿಯವರನ್ನು ಸಿಎಂ ಸಿದ್ದರಾಮಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆಂಬ ಮಾಹಿತಿ ಸಿಕ್ಕಿದೆ. ಮಾಧ್ಯಮಗಳಲ್ಲಿ ರಾಸಲೀಲೆ ವಿಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸಿಎಂ ಅವರನ್ನು ಭೇಟಿಯಾಗಲು ಹೋದ ಮೇಟಿಯವರಿಗೆ ಸರಿಯಾಗಿ ಮಂಗಳಾರತಿ ಆಗಿದೆ. ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತೇನ್ರೀ ಎಂದು ಮೇಟಿಯವರನ್ನು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರೆನ್ನಲಾಗಿದೆ. ಜೊತೆಗೆ, ಪ್ರಕರಣದ ತನಿಖೆಗೆ ಸಿಎಂ ಆದೇಶಿಸಿದ್ದಾರೆ.

"ನೀನೊಬ್ಬ ವಿಶ್ವಾಸದ್ರೋಹಿ. ನಾಚಿಕೆಯಾಗಲ್ವಾ? ನಾವು ಬಿಜೆಪಿಯವರನ್ನು ಬೈಯುತ್ತಿದ್ದೆವು. ಈಗ ನೀವೇ ಹೀಗೇ ಮಾಡಿದ್ದೀಯ. ನಿನಗೆ ಸಚಿವ ಸ್ಥಾನ ನೀಡುವ ಬದಲು ಇನ್ಯಾರಿಗಾದರೂ ನೀಡಬೇಕಿತ್ತು. ಬಿಜೆಪಿ ವಿರುದ್ಧ ಆರೋಪ ಮಾಡಲಿಕ್ಕೆ ನಮಗೆ ಯಾವ ನೈತಿಕತೆ ಉಳಿಯಿತು?" ಎಂದು ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿ ಹೇಳಿದ್ದಾರೆ.

"ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ರಾಜೀನಾಮೆ ಪತ್ರ ಪಡೆದು ಹೊರಹೋಗು" ಎಂದು ಸಿದ್ದರಾಮಯ್ಯನವರೇ ಖುದ್ದಾಗಿ ಮೇಟಿಯವರ ರಾಜೀನಾಮೆ ಪಡೆದಿದ್ದಾರೆ.

ಮೇಟಿ ರಾಜೀನಾಮೆ ಕೊಟ್ಟಿರುವ ವಿಷಯವನ್ನು ಸ್ವತಃ ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ರಾಜೀನಾಮೆಯನ್ನು ಅಂಗೀಕರಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದೇನೆ. ಪ್ರಕರಣದ ತನಿಖೆಗೆ ಆದೇಶವನ್ನೂ ಮಾಡಿದ್ದೇನೆ ಎಂದು ಟ್ವಿಟ್ಟರ್'ನಲ್ಲಿ ಸಿಎಂ ತಿಳಿಸಿದ್ದಾರೆ.