ಸ್ಯಾಂಡಲ್ ವುಡ್ ನಟರಾಗಿ ಎಷ್ಟು ಪ್ರಖ್ಯಾತರಾಗಿದ್ದರೋ  ರಾಜಕಾರಣಿಯಾಗಿಯೂ ಕೂಡ  ಅಷ್ಟೇ ಗಮನ ಸೆಳೆದಿದ್ದರು. ಅಂಬರೀಷ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ  ಮಾಡಿ ಗೆಲುವು ಕಂಡಿದ್ದ ರಾಜಕಾರಣಿಯೇ ಅವರ ವಿರುದ್ಧ ಸ್ಪರ್ಧೆ ಮಾಡಲು ನನಗೆ ಭಯವಿತ್ತು ಎಂದು ಹೇಳಿದ್ದಾರೆ.

ಬೆಂಗಳೂರು : ನಾನು ಸ್ಥಳೀಯ ಎಂಬ ಭಾವನೆ ಹಾಗೂ ಹಿಂದಿನ ಚುನಾವಣೆಗಳಲ್ಲಿ ಸೋಲುಂಡಿದ್ದ ನನ್ನ ಬಗ್ಗೆ ಇದ್ದ ಅನುಕಂಪ. ಇವು ಎರಡೇ ಸಂಗತಿ ಗಳು ಅಪಾರ ಜನ ಮನ್ನಣೆ ಹೊಂದಿದ್ದ, ಯುವಕರು ಹಾಗೂ ಮಹಿಳೆಯರ ಕಣ್ಮಿಣಿಯಾಗಿದ್ದ ಅಂಬರೀಷ್ ಅವರನ್ನು 9 ಸಾವಿರ ಮತಗಳ ಅಂತರದಿಂದ ಸೋಲಿಸಲು ನನಗೆ ನೆರವು ನೀಡಿದವು. 

ಹೀಗಂತ ಹೇಳುತ್ತಾರೆ ರೆಬಲ್ ಸ್ಟಾರ್ ಅಂಬರೀಷ್ ಮೊಟ್ಟ ಮೊದಲ ಬಾರಿಗೆ ಎದುರಿಸಿದ ರಾಮನಗರ ಉಪ ಚುನಾವಣೆಯಲ್ಲಿ ಸೋಲುಣಿಸಿದ ಸಿ.ಎಂ. ಲಿಂಗಪ್ಪ. ಮಾಜಿ ಪ್ರಧಾನಿ ದೇವೇಗೌಡರು 1996 ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ರಾಜಿನಾಮೆ ನೀಡಿ, ಲೋಕಸಭೆ ಸ್ಪರ್ಧೆ ಮಾಡುತ್ತಾರೆ. ಆಗ ಮೊದಲ ಬಾರಿಗೆ 1997ರ ಫೆಬ್ರವರಿಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಗೆ ಜನತಾದಳದಿಂದ ಅಂಬರೀಷ್ ಸ್ಪರ್ಧೆ ಮಾಡಿದರು. ಆಗ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದು ಸಿ.ಎಂ. ಲಿಂಗಪ್ಪ. ಅಂಬರೀಷ್ ಪಾಲಿಗೆ ಇದು ಮೊದಲ ಚುನಾವಣೆ. ಭಾರಿ ರಂಗೇರಿದ್ದ ಈ ಚುನಾವಣೆಯಲ್ಲಿ ಅಂಬರೀಷ್ ಅವರನ್ನು 9 ಸಾವಿರ ಮತಗಳಿಂದ ಸಿ.ಎಂ. ಲಿಂಗಪ್ಪ ಸೋಲಿಸುತ್ತಾರೆ.

ಈ ಘಟನೆಯನ್ನು ನೆನೆಯುವ ಲಿಂಗಪ್ಪ ಅವರು, ಅಂಬರೀಷ್ ಅವರ ವಿರುದ್ಧ ಸ್ಪರ್ಧೆ ಮಾಡುವುದಕ್ಕೆ ಒಂದು ರೀತಿಯ ಭಯ ಇತ್ತು ಎಂದು ಒಪ್ಪಿಕೊಳ್ಳುತ್ತಾರೆ. ‘ನಾನು ಸ್ಪರ್ಧೆ ಮಾಡಬೇಕು ಎಂದು ನಿರ್ಧರಿಸಿದಾಗ ಪಕ್ಷದ ವರಿಷ್ಠರು ಒಂದೆರಡುದಿನ ಸಮಯ ತೆಗೆದು ಕೊಂಡು ಅಲೋಚನೆ ಮಾಡಿ ಅವಸರ ಪಡಬೇಡಿ ಎಂದು ಬುದ್ಧಿ ಹೇಳಿ ಕಳಿಸಿದ್ದರು. ಆದರೆ, ಅಂಬರೀಷ್‌ಗಿಂತ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದ ನನಗೆ ಹೋರಾಟ ಬದುಕು ಅನಿವಾರ್ಯವಾಗಿತ್ತು’ ಎಂದರು.