ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿಗೆ ಮಾನ್ಯತೆ ಕೊಡುವಂತೆ ನಿರ್ದೇಶನ ನೀಡಲು ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಬೆಂಗಳೂರು (ಆ.22): ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿಗೆ ಮಾನ್ಯತೆ ಕೊಡುವಂತೆ ನಿರ್ದೇಶನ ನೀಡಲು ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.


ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ)ವು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು 2013-14 ನೇ ಸಾಲಿನಿಂದ ರದ್ದುಪಡಿಸಿದೆ. ಮುಕ್ತ ವಿವಿಯ ಕುರಿತಂತೆ ತಜ್ಞರ ಸಮಿತಿಯೊಂದನ್ನು ರಚಿಸಿ, ಆ ಬಗ್ಗೆ ತನಿಖೆ ನಡೆಸಿದೆ. ಅದಾದ ಬಳಿಕ ತಜ್ಞರ ಸಮಿತಿ ಯುಜಿಸಿಗೆ ವರದಿ ಸಲ್ಲಿಸಿದೆ. ವರದಿ ಆಧರಿಸಿ ಯುಜಿಸಿ ಆಡಳಿತ ಮಂಡಳಿ ಮುಕ್ತ ವಿವಿಯಿಂದ ಸಂಬಂಧಪಟ್ಟ ಅನೇಕ ದಾಖಲಾತಿಗಳನ್ನು ಕೇಳಿ ಪಡೆದುಕೊಂಡಿದೆ. ಹೀಗಾಗಿ ಮುಕ್ತ ವಿವಿಗೆ ಮಾನ್ಯತೆ ನೀಡುವಂತೆ ಕೋರಿ ಮರು ಪ್ರಸ್ತಾವವನ್ನು ಯುಜಿಸಿಗೆ ಸಲ್ಲಿಸಲಾಗಿದೆ. ಈ ಕುರಿತು ಚರ್ಚಿಸಲು ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜೂನ್ 21 ರಂದು ದೆಹಲಿ ಸಭೆಯನ್ನೂ ನಡೆಸಲಾಗಿದೆ. ಅದಾದ ಬಳಿಕ ಯುಜಿಸಿಯಿಂದ ಮುಕ್ತ ವಿವಿಗೆ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಯುಜಿಸಿ ಮಾನ್ಯತೆ ವಿಷಯವಾಗಿ ಕಾಯುವಂತಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮೂಹಗಳ ವಿದ್ಯಾರ್ಥಿಗಳೇ ಮುಕ್ತ ವಿವಿಯಿಂದ ವಿವಿಧ ಕೋರ್ಸ್‌ಗಳನ್ನು ಪೂರೈಸಿ, ಉನ್ನತ ಶಿಕ್ಷಣ ಪಡೆಯುತ್ತಾರೆ. ಆದರೆ ಮುಕ್ತ ವಿವಿಯ ಮಾನ್ಯತೆ ರದ್ದತಿಯಿಂದಾಗಿ ಇಂತಹ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ ಹಾಗೂ ಉನ್ನತ ಶಿಕ್ಷಣದಿಂದ ಅನೇಕ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಈ ಕುರಿತು ಅನೇಕ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು ನಿರಂತರವಾಗಿ ಮುಕ್ತ ವಿವಿಗೆ ಯುಜಿಸಿ ಮಾನ್ಯತೆ ಕೊಡಿಸುವಂತೆ ಕೋರಿ ಮನವಿ ಸಲ್ಲಿಸುತ್ತಿದ್ದಾರೆ. ಆದ್ದರಿಂದ ತಾವು ವೈಯಕ್ತಿಕವಾಗಿ ಈ ಬಗ್ಗೆ ಗಮನಹರಿಸಿ ಮಾನ್ಯತೆ ನೀಡುವಂತೆ ಯುಜಿಸಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.